ಅಂತರ್ ಧರ್ಮೀಯ ವಿವಾಹ ನೋಂದಣಿಗೆ ಹಿಂದೂ ಸಂಘಟನೆಗಳ ಅಡ್ಡಿ

ಮಂಗಳೂರು, ಡಿಸೆಂಬರ್ 26: ವಿಭಿನ್ನ ಕೋಮಿನ ಜೋಡಿ ವಿವಾಹ ನೋಂದಣಿಗೆ ಬಂಟ್ವಾಳ ಉಪ ನೋಂದಣಿ ಕಚೇರಿಗೆ ಸೋಮವಾರ ಬಂದ ವೇಳೆ ನೂರಾರು ಮಂದಿ ಸಂಘ ಪರಿವಾರದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮೂಲದ ಮುಸ್ಲಿಂ ಯುವಕ ಮತ್ತು ಮಡಿಕೇರಿ ಮೂಲದ ಹಿಂದೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ವಿವಾಹ ನೋಂದಣಿಗಾಗಿ ಅರ್ಜಿ ಸಲ್ಲಿಸಲು ಇಬ್ಬರೂ ನೋಂದಣಿ ಕಚೇರಿಗೆ ಆಗಮಿಸಿದ್ದರು. ಈ ವಿಷಯ ತಿಳಿದ ಸಂಘ ಪರಿವಾರದ ಕಾರ್ಯಕರ್ತರು ಕಚೇರಿ ಸುತ್ತ ಜಮಾಯಿಸಿ, ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸ್ಠಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಠಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾಧಿಕಾರಿ ನಂದ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ ಇಬ್ಬರಿಗೂ ರಕ್ಷಣೆ ನೀಡಿದರು.

ಅಲ್ಲದೇ ಯುವತಿಯ ಸಹೋದರನನ್ನ ಬಿ.ಸಿ.ರಸ್ತೆಗೆ ಕರೆಸಿದ ಪೊಲೀಸರು ಮಾತುಕತೆ ನಡೆಸಿದರು. ಈ ವೇಳೆ ಯುವತಿ ಸಹೋದರ, ‘ನನ್ನ ಸಹೋದರಿ ಮತ್ತು ಯುವಕ ಐದು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರು ಮದುವೆಗೆ ನಿರ್ಧರಿಸಿದ್ದು, ಇದಕ್ಕೆ ಎರಡೂ ಮನೆಯವರ ಒಪ್ಪಿಗೆ ಇದೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.  ಆ ನಂತರ ಯುವತಿ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ಬಳಿಕ ಖಾಸಗಿ ಕಾರಿನಲ್ಲಿ ಮಡಿಕೇರಿಯತ್ತ ಪ್ರಯಾಣಿಸಿದರು.

Comments

Leave a Reply

Your email address will not be published. Required fields are marked *