ಅಫಾನ್ ಹತ್ಯೆಗೆ 5 ಲಕ್ಷ ರೂ.ಸುಪಾರಿ:ಹಣದ ಮೂಲದ ತನಿಖೆ

ಕಾರವಾರ: ಭಟ್ಕಳದ ಯುವಕ ಮೊಹಮದ್ ಅಫಾನ್ ಜಬಾಲಿ(25)ಹತ್ಯೆಗೆ ಸುಪಾರಿ ಪಡೆದ ಹಂತಕರು ಆತನನ್ನು ಗೋವಾದಲ್ಲಿ ಕೊಂಡೊಯ್ದು ಕೊಲೆ ಮಾಡುವ ಯೋಜನೆ ರೂಪಿಸಿದ್ದರು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳದ ಶಾನಭಾಗ ರೆಸಿಡೆನ್ಸಿಯ 114 ನೇ ಸಂಖ್ಯೆ ಕೋಣೆಯಲ್ಲಿ ಅ.19 ರಂದು ಅಫಾನ್​ನನ್ನು ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಆ ಸಂಬಂಧ ಎಲ್ಲ 5ಆರೋಪಿಗಳನ್ನು ಬಂಧಿಸಲಾಗಿದೆ.

ಭಟ್ಕಳದ ಮೊಹಮದ್ ಇಕ್ಬಾಲ್ ಮಂಗಳೂರಿನ ನಾಲ್ವರಿಗೆ ಸುಮಾರು 5 ಲಕ್ಷ ರೂ.ಸುಪಾರಿ ನೀಡಿದ್ದ. ಹತ್ಯೆಗೆ ಯೋಜನೆಯೂ ರೂಪುಗೊಂಡಿತ್ತು. ಆದರೆ, ಅದಕ್ಕೂ ಮೊದಲೇ ಅಫಾನ್ ಹಾಗೂ ಆರೋಪಿಯ ನಡುವೆ ಶಾನಭಾಗ ರೆಸಿಡೆನ್ಸಿಯಲ್ಲಿ ಜಗಳ ನಡೆದು ಅದು ಕೊಲೆಯ ಹಂತಕ್ಕೆ ಹೋಗಿದೆ. 
ಆರೋಪಿಗಳು ಯುವಕನನ್ನು ಯಾವುದೋ ವಿಷಯಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂಬುದಷ್ಟೇ ತಿಳಿದು ಬಂದಿದೆ. ಕೊಲೆ ನಡೆದ ಸ್ಥಳದಲ್ಲಿ 5.12 ಲಕ್ಷ ರೂ. ದೊರಕಿದೆ. ಬಾಕಿ ವಿವರಗಳನ್ನು ಇನ್ನಷ್ಟು ತನಿಖೆಯ ನಂತರವಷ್ಟೇ ಬಹಿರಂಗಪಡಿಸಬಹುದು ಎಂದರು.

ಪುರವರ್ಗದ ಮೊಹಮದ್ ಇಕ್ಬಾಲ್ ಇಬ್ರಾಹಿಂ ಶೇಖ್ ಎಂಬಾತನನ್ನು ಕೊಲೆ ನಡೆದ ದಿನವೇ ಬಂಧಿಸಲಾಗಿತ್ತು. ಮಂಗಳೂರು ಮೂಲದ ಸುಪಾರಿ ಕಿಲ್ಲರ್​ಗಳಾದ ಮೊಹಮದ್ ಸಿರಾಜುದ್ದೀನ್ ಹುಸೇನಾರ್(34), ನಜೀಮ್ ಇಬ್ರಾಹಿಂ(23), ಮೊಹಮದ್ ಮುಶ್ರಫ್ ಇಮ್ತಿಯಾಜ್(19), ಮೊಹಮದ್ ಅಶ್ರಫ್(28) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಹೆಚ್ಚುವರಿ ಎಸ್​ಪಿ ಗೋಪಾಲ ಬ್ಯಾಕೋಡ್ ಅವರ ನೇತೃತ್ವದಲ್ಲಿ ಭಟ್ಕಳ ಎಎಸ್​ಪಿ ನಿಖಿಲ್ ಬಿ. ಹಾಗೂ ಇತರ ಅಧಿಕಾರಿಗಳ ವಿಶೇಷ ತಂಡ ಈ ಪ್ರಕರಣ ಪತ್ತೆಗೆ ಶ್ರಮಿಸಿದ್ದರು ಎಂದರು.

Source: Sahil Online

Comments

Leave a Reply

Your email address will not be published. Required fields are marked *