ಬಡವರ ಮಕ್ಕಳ ಕೊಲೆಗಳನ್ನು ಬಲಿದಾನ ಎಂದು ಬಣ್ಣಿಸುವವರು ಸ್ವತಃ ಬಲಿದಾನ ನೀಡಲಿ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಶ್ರಫ್ ಕೇರಳದಿಂದ ಮಂಗಳೂರಿಗೆ ಬಂದಿದ್ದ ಯುವಕ. ಮಂಗಳೂರಿನ ರೈಲು ಹಳಿಗಳ ಮೇಲೆ ಬಿದ್ದ ಚಿಂದಿ ಆಯುತ್ತಾ ಬದುಕು ಸಾಗಿಸುವ ಅಶ್ರಫ್‌ಗೆ ಮಂಗಳೂರಿನಲ್ಲಿ ಮನೆ ಇಲ್ಲ, ಸೂರಿಲ್ಲ. ರಾತ್ರಿ ಸಿಕ್ಕ ಜಾಗದಲ್ಲಿ ಮಲಗುತ್ತಾನೆ.

ಅಶ್ರಫ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ಒಂದು ಜಾಗಕ್ಕೆ ಹೋಗುತ್ತಾನೆ. ಅಲ್ಲಿ ನೀರು ಕುಡಿಯುತ್ತಾನೆ. ಮೊದಲೇ ಮಾನಸಿಕ ಅಸ್ವಸ್ಥ. ಮೇಲಾಗಿ ಮುಸ್ಲಿಂ. ಇಷ್ಟಕ್ಕೇ ಆತನ ಮೇಲೆ ಮೂವತ್ತಕ್ಕೂ ಹೆಚ್ಚು ಯುವಕರು ಮುಗಿಬೀಳುತ್ತಾರೆ. ಆತನ ಇಡೀ ದೇಹಕ್ಕೆ ಮನಬಂದಂತೆ ಥಳಿಸಿ ಗುಂಪು ಹಲ್ಲೆ ಮಾಡಿ ಕೊಲೆ ಮಾಡುತ್ತಾರೆ.

ಅಸಹಜ ಸಾವು ಎಂದು ದಾಖಲಾಗಿದ್ದ ಈ ಸಾವು ಮರಣೋತ್ತರ ಶವಪರೀಕ್ಷೆಯ ಬಳಿಕ ಗುಂಪುಹಲ್ಲೆಯಿಂದ ಆದ ಸಾವು ಎಂದು ಗೊತ್ತಾಗುತ್ತದೆ. ಅದಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ “ಆತ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ. ಅದಕ್ಕಾಗಿ ಅವನ ಮೇಲೆ ಗುಂಪು ಹಲ್ಲೆ ಮಾಡಿದೆ” ಎಂದು ಕಥೆ ಕಟ್ಟಿತು. ಏಕೆಂದರೆ ಈ ಗುಂಪು ಹಲ್ಲೆಯಲ್ಲಿ ಪಾಲ್ಗೊಂದ ಬಹುತೇಕ ಯುವಕರು ಒಂದೋ ಇವರ ಕಾರ್ಯಕರ್ತರು ಅಥವಾ ಕನಿಷ್ಟ ಪಕ್ಷ ಇವರ ದ್ವೇಷದ ವಿಷ ಕಾರುವ ಸಂಘಿ ಐಡಿಯಾಲಜಿಯಿಂದ ಪ್ರೇರಿತರಾದವರು.

ಪಾಕಿಸ್ತಾನ ಝಿಂದಾಬಾದ್ ಎಂದು ಅಶ್ರಫ್ ಕೂಗಿದ ಅಂದು ಕೊಳ್ಳೋಣ. ಹಾಗೆ ಘೋಷಣೆ ಕೂಗಿದರೆ ತಪ್ಪು. ಹಾಗಂತ ಅಷ್ಟಕ್ಕೆ ಒಬ್ಬ ಮಾನಸಿಕ ಅಸ್ವಸ್ಥನನ್ನು ಕೊಲೆ ಮಾಡಿಬಿಡುವುದೆ? ಮತ್ತು ಕಾನೂನಿನಲ್ಲಿ ನಂಬಿಕೆ ಎಂದು ಬಾಯಿಮಾತಿಗಾದರೂ ಹೇಳುವ ಬಿಜೆಪಿ ನಾಯಕರು ಈ ಕೊಲೆಯನ್ನು ಒಂದು ಶಬ್ದದಲ್ಲಿಯೂ ಖಂಡಿಸದೆ ಈ ಕಗ್ಗೊಲೆಯನ್ನು ಸಮರ್ಥಿಸಿಬಿಡುವುದೆ?

ಅದಾದ ಬಳಿಕ ಕೆಲವೇ ದಿನಗಳಲ್ಲಿ ಅಂದರೆ ನಿನ್ನೆ ಸುಹಾಸ್ ಶೆಟ್ಟಿ ಎಂಬಾತನ ಕೊಲೆಯಾಗುತ್ತದೆ. ಈತ ರೌಡಿ ಶೀಟರ್. ಎರಡೆರಡು ಕೊಲೆಗಳಲ್ಲಿ ಆರೋಪಿ. ಒಂದು ಆರೋಪ ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಹತ್ಯೆ ಮಾಡಿದ್ದು. ಇನ್ನೊಂದು ಆರೋಪ ಹಿಂದೂ ಯುವಕ ಕೀರ್ತಿ ಕೊಲೆಯಲ್ಲಿ ಭಾಗಿಯಾಗಿದ್ದು. ಅದಲ್ಲದೆ ಆತನ ವಿರುದ್ಧ ಹಲವು ಪ್ರಕರಣಗಳಿವೆ. ಬಿಜೆಪಿ ಮತ್ತು ಸಂಘಪರಿವಾರದ ಪ್ರಕಾರ ಇಷ್ಟು ನಟೋರಿಯಸ್ ಹಿನ್ನೆಲೆಯ ಸುಹಾಸ್ ಶೆಟ್ಟಿ ಅವರ ಹಿಂದೂ ಕಾರ್ಯಕರ್ತ! ಹಿಂದೂ ಹೋರಾಟಗಾರ!
ಬಿಜೆಪಿಯವರ ಪ್ರಕಾರ ಅಶ್ರಫ್ ಕಗ್ಗೊಲೆಯಾಗುವ ತನಕ ಸರಿಯಾಗಿದ್ದ ಮಂಗಳೂರಿನ ಶಾಂತಿ ಸುವ್ಯವಸ್ಥೆ ಸುಹಾಸ್ ಶೆಟ್ಟಿ ಕೊಲೆಯಾದ ಕೂಡಲೇ ಹಾಳಾಗುತ್ತದೆ. ಅಶ್ರಫ್ ಕೊಲೆಯಾದಾಗ ದೇಶಭಕ್ತರ ನಾಡಾಗಿ ಕಂಡಿದ್ದ ಮಂಗಳೂರು ಸುಹಾಸ್ ಕೊಲೆಯಾದ ಕೂಡಲೇ ಪಾಪಿ ಪಾಕಿಸ್ತಾನದಂತೆ ಕಾಣಿಸುತ್ತದೆ.

ಸುಹಾಸ್ ಕೊಲೆ ಖಂಡನೀಯ. ಆದರೆ ಆ ಕೊಲೆಯನ್ನು ಬಳಸಿಕೊಂಡು ಹೆಣದ ಮೇಲೆ ರಾಜಕೀಯ ಮಾಡುತ್ತಾ, ಬಾಯಿಗೆ ಬಂದಂತೆ ಕೋಮುದ್ವೇಷ ಪ್ರಚೋದಿಸುವ ಹೇಳಿಕೆಗಳನ್ನು ಪದೇಪದೆ ನೀಡುತ್ತಾ ಹಿಂದೂ ಯುವಕರನ್ನು ಕೆಣಕುತ್ತಿರುವುದು ಇದೇ ಬಿಜೆಪಿ ಮತ್ತು ಇವರ ಸಂಘಟನೆಗಳ ನಾಯಕರು ತಾನೆ? ಶಾಂತಿ ಸುವ್ಯವಸ್ಥೆ ಕಾಪಡಲು ಸಹಕರಿಸುವ ಜವಾಬ್ದಾರಿ ಬಿಜೆಪಿಗೆ, ಆರೆಸ್ಸೆಸ್‌ಗೆ ಇಲ್ಲವೆ?

ನಿನ್ನೆ ಸುಹಾಸ್ ಕೊಲೆ ನಡೆದ ಸಮಯದಿಂದ ಈ ಪೋಸ್ಟ್ ಬರೆಯುವ ಹೊತ್ತಿನ ವರೆಗೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ, ಮಂಗಳೂರಿನ ಮೂರು ಬೇರೆಬೇರೆ ಪ್ರದೇಶಗಳಲ್ಲಿ ಈ ಯಾವುದೇ ಘಟನೆಗಳಿಗೆ ಸಂಬಂಧವೇ ಇಲ್ಲದ ನಾಲ್ವರು ಅಮಾಯಕ ಮುಸ್ಲಿಮ್ ಯುವಕರ ಮೇಲೆ ಹಲ್ಲೆಯಾಗಿದೆ. ಮಂಗಳೂರಲ್ಲಿ ಇಷ್ಟೆಲ್ಲ ಹಿಂಸೆ ನಡೆಯುತ್ತಿದ್ದರೂ ತಮ್ಮ ಕಾರ್ಯಕರ್ತರನ್ನು ತಡೆಯುವುದು ಬಿಟ್ಟು ಇನ್ನಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ಇದೇ ಕಲ್ಲಡ್ಕ ಗ್ಯಾಂಗ್ ಅಲ್ಲವೆ? ಮಂಗಳೂರಿನಲ್ಲಿ ಇಂದು ಹಿಂದೂ ಪ್ರಯಾಣಿಕರೇ ಹೆಚ್ಚಿದ್ದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮೇಲೆ ನಿಮ್ಮದೇ ಕಾರ್ಯಕರ್ತರು ಕಲ್ಲು ತೂರಿದರಲ್ಲ ಅದಕ್ಕೆ ಯಾರು ಹೊಣೆ.

ಯಾವುದಾದರೂ ಪ್ರಯಾಣಿಕರಿಗೆ ಅದರಲ್ಲೂ ಹಿಂದೂಗಳಿಗೆ ಗಂಭೀರ ಗಾಯಗಳಾಗುತ್ತಿದ್ದರೆ ಯಾರು ಹೊಣೆ?
ಹಿಂದೂತ್ವಕ್ಕಾಗಿ, ಹಿಂದೂ ಧರ್ಮಕ್ಕಾಗಿ ಇನ್ನೊಬ್ಬ ಯುವಕನ ಬಲಿದಾನವಾಗಿದೆ ಎಂದು ಹೇಳಿಕೆ ನೀಡುವ ಕಲ್ಲಡ್ಕ ಪ್ರಭಾಕರ ಭಟ್ಟರೆ, ನಿಮ್ಮ ಹಿಂದೂ ಧರ್ಮಕ್ಕೆ ಕರಾವಳಿಯ ಇನ್ನೂ ಎಷ್ಟು ಬಡ ಹಿಂದೂ ಮನೆಗಳ ಮಕ್ಕಳ ಹೆಣಗಳು ನಿಮಗೆ ಬೇಕು?

ಅಶ್ರಫ್ ಕೊಲೆಯೂ ಖಂಡನೀಯ. ಸುಹಾಸ್ ಕೊಲೆಯೂ ತಪ್ಪು. ಇದು ನನ್ನ ನಿಲುವು. ನಮ್ಮಂಥವರು ಎರಡೂ ಕುಟುಂಬಗಳಿಗಾಗಿ ಮಿಡಿಯುತ್ತೇವೆ. ಆದರೆ ಬಿಜೆಪಿ ಮತ್ತು ಸಂಘಕ್ಕೆ ಸುಹಾಸ್ ಕೊಲೆ ಮಾತ್ರ ತಪ್ಪು, ಅಶ್ರಫ್ ಕೊಲೆ ಸರಿ!

ಪೊಲೀಸರಿರಲಿ, ಕಾನೂನು ವ್ಯವಸ್ಥೆ ಇರಲಿ, ಸರ್ಕಾರವಿರಲಿ ಸುಹಾಸ್ ಮತ್ತು ಅಶ್ರಫ್ ಕೊಲೆ ಮಾಡಿದ ಕೊಲೆಗಡುಕರನ್ನು ಪತ್ತೆ ಮಾಡಬಹುದು, ಶಿಕ್ಷೆ ನೀಡಬಹುದು. ಅದಕಿಂತ ಹೆಚ್ಚಿನದನ್ನು ಅವು ಈ ವ್ಯವಸ್ಥೆಗಳು ಮಾಡಲಾರವು. ಕರಾವಳಿಯ ಸಜ್ಜನರು, ಅದು ಯಾವುದೇ ಮತಧರ್ಮದವರಿರಲಿ, ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಮಕ್ಕಳನ್ನು ಈ ಮತಾಂಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ದೂರವಿಟ್ಟು ಕಾಪಾಡುವುದು. ಈ hatemongerಗಳ ದ್ವೇಷದ, ಹಿಂಸೆಯ ಮಾತು ಮತ್ತು ಪ್ರಚೋದನೆಗಳನ್ನು ಧಿಕ್ಕರಿಸಿ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಿಟ್ಟುಕೊಂಡು ಶಾಂತಿ, ಸಹಬಾಳ್ವೆಯ ಬದುಕು ಬಾಳುವುದು.

ಈ ಮತಾಂಢ, ಕೋಮುವಾದಿ, hatemonger ಪಾರ್ಟಿಗಳಿಗೆ, ನಾಯಕರಿಗೆ, ಸಂಘಟನೆಗಳಿಗೆ ಅವರ ರಾಜಕೀಯ ಲಾಭಕ್ಕಾಗಿ ಅವರವರ ಧರ್ಮಗಳ ಯುವಕರದ್ದೇ ಬಲಿದಾನಗಳು ಬೇಕಾದರೆ ಅಂತಹ ಬಲಿದಾನಕ್ಕೆ ಕರೆಕೊಡುತ್ತಿರುವವರು, ಅದಕ್ಕೆ ಪ್ರಚೋದಿಸುವವರು ಮೊದಲು ತಮ್ಮದೇ ಪ್ರಾಣಗಳನ್ನು ಧರ್ಮ ಉಳಿಸುವ ಆ ಮಾಹಾಕಾರ್ಯಕ್ಕಾಗಿ ಬಲಿಕೊಡಲಿ. ಆಗಲಾದರೂ ನಾವು ನೆಮ್ಮದಿಯಿಂದ ಬದುಕಬಹುದೋ, ಟ್ರೈ ಮಾಡೋಣ..

ಲೇಖಕ: ಶಶಿಧರ ಹೆಮ್ಮಾಡಿ

ಶಶಿಧರ್ ಹೆಮ್ಮಾಡಿ ಅವರು ಕರಾವಳಿ ಕರ್ನಾಟಕ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ. ಅವರು ಕರಾವಳಿಯ ಸಾಮಾಜಿಕ-ರಾಜಕೀಯ ಸ್ಥಿತಿಗತಿಯ ಬಗ್ಗೆ ಗಹನ ತಿಳುವಳಿಕೆಯನ್ನು ಹೊಂದಿರುವ ಅನುಭವೀ ಪತ್ರಕರ್ತರು. ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಅನುಮತಿಯಿಂದ ಪ್ರಕಟಿಸಲಾಗಿದೆ.

Comments

Leave a Reply

Your email address will not be published. Required fields are marked *