ಅಕ್ರಮ ಗಣಿಗಾರಿಕೆ: MLA ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ವಿಶೇಷ ಕೋರ್ಟ್ ತೀರ್ಪು

ಹೈದರಾಬಾದ್: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿದ್ದ ಹೈದರಾಬಾದ್ ಸಿಬಿಐ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಒಎಂಸಿ ಕಂಪನಿ ಮಾಲೀಕ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದೆ ಮತ್ತು 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇನ್ನು, ಇದೇ ಪ್ರಕರಣದಲ್ಲಿ ವಿ.ಡಿ.ರಾಜಗೋಪಾಲ್, ದಿ. ರಾವ್ ಲಿಂಗಾರೆಡ್ಡಿ, ಕೆ.ಮೆಹಫೂಸ್ ಅಲಿ ಖಾನ್ ಕೂಡ ಅಪರಾಧಿ ಎಂದು ಕೋರ್ಟ್​​ ತೀರ್ಪು ನೀಡಿದೆ.

ಜನಾರ್ದನ ರೆಡ್ಡಿ, ಬಿ.ವಿ ಶ್ರೀನಿವಾಸ ರೆಡ್ಡಿ (ಒಎಂಸಿ ವ್ಯವಸ್ಥಾಪಕ ನಿರ್ದೇಶಕ), ಮೆಫಾಜ್ ಅಲಿ ಖಾನ್ (ಜನಾರ್ದನ ರೆಡ್ಡಿ ಆಪ್ತ ಸಹಾಯಕ), ವಿ ಡಿ ರಾಜಗೋಪಾಲ್ (ಗಣಿ ಇಲಾಖೆಯ ಮಾಜಿ ನಿರ್ದೇಶಕ), ಕೃಪಾನಂದಂ (ನಿವೃತ್ತ ಐಎಎಸ್ ಅಧಿಕಾರಿ), ಸಬಿತಾ ಇಂದ್ರಾರೆಡ್ಡಿ (ತೆಲಂಗಾಣದ ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ), ವೈ. ಶ್ರೀಲಕ್ಷ್ಮಿ (2022ರಲ್ಲಿ ಸೇವೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ) ಮತ್ತು ದಿವಂಗತ ಆರ್. ಲಿಂಗಾ ರೆಡ್ಡಿ (ಅಂದಿನ ಗಣಿ ಇಲಾಖೆಯ ಸಹಾಯಕ ನಿರ್ದೇಶಕ) ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 420, 409, 468 ಮತ್ತು 471 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಜೊತೆಗೆ 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

2009 ರಲ್ಲಿ ಸಿಬಿಐ ಒಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ತನಿಖೆ ಪ್ರಾರಂಭಿಸಿತ್ತು. ವೈ.ಎಸ್. ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಒಎಂಸಿ ಕಂಪನಿಗೆ ಓಬಳಾಪುರಂ ಮತ್ತು ಡಿ. ಹಿರೇಹಾಳದಲ್ಲಿ ಕ್ರಮವಾಗಿ 68.5 ಹೆಕ್ಟೇರ್ ಮತ್ತು 39.5 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿತ್ತು. ಅಂದಿನ ಗಣಿ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗಾ ರೆಡ್ಡಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವ ವೇಳೆ 23 ಅರ್ಜಿದಾರರನ್ನು ನಿರ್ಲಕ್ಷಿಸಿ, ಒಎಂಸಿ ಕಂಪನಿಗೆ ಗುತ್ತಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಇದೆ.

ಜನಾರ್ಧನ ರೆಡ್ಡಿ 25 ಮಾರ್ಚ್ 2025 ನಲ್ಲಿ ಬಿಜೆಪಿ ಗೆ ಮರು ಸೇರ್ಪಡೆಯಾಗಿದ್ದರು.

Comments

Leave a Reply

Your email address will not be published. Required fields are marked *