ಕುಂದಾಪುರ, ಮೇ 07, 2025: ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ಗಡಿ ಕಲ್ಲಿನ ವಿವಾದವೊಂದರಿಂದಾಗಿ ನೆರೆಯವನೊಬ್ಬ ಮಹಿಳೆಯ ಮೇಲೆ ಹಾರೆಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ತಾಹಿರಾ (58), ಕಾವ್ರಾಡಿ ಗ್ರಾಮದ ನಿವಾಸಿಯಾಗಿದ್ದು, ಮೇ 06, 2025 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿದ್ದಾಗ, ಪಕ್ಕದ ಮನೆಯ ಶಫಿವುಲ್ಲಾ ಎಂಬಾತ ತಾಹಿರಾ ಅವರ ಕಂಪೌಂಡ್ ಬದಿಯಲ್ಲಿ ಹಾಕಿದ್ದ ಮಣ್ಣನ್ನು ತೆಗೆಯುತ್ತಿದ್ದ. ಈ ವೇಳೆ ಶಫಿವುಲ್ಲಾ, ತಾಹಿರಾ ಅವರ ಜಾಗದ ಗಡಿಯನ್ನು ಸೂಚಿಸುವ ಕಲ್ಲನ್ನು ತೆಗೆದುಹಾಕಿದ್ದಾನೆ. ಇದನ್ನು ಗಮನಿಸಿದ ತಾಹಿರಾ, ಶಫಿವುಲ್ಲಾ ಬಳಿ ತೆರಳಿ, ಗಡಿ ಕಲ್ಲನ್ನು ಯಾಕೆ ತೆಗೆದೆ ಎಂದು ಪ್ರಶ್ನಿಸಿದ್ದಾರೆ.
ಮಣ್ಣನ್ನು ಸರಿಸುವ ಕೆಲಸದಲ್ಲಿ ತೊಡಗಿದ್ದ ಶಫಿವುಲ್ಲಾ, ಏಕಾಏಕಿ ಹಿಂದಿನಿಂದ ಬಂದು ತನ್ನ ಕೈಯಲ್ಲಿದ್ದ ಹಾರೆಯಿಂದ ತಾಹಿರಾ ಅವರ ತಲೆಯ ಎಡಭಾಗ ಮತ್ತು ಎಡ ಭುಜಕ್ಕೆ ಹೊಡೆದಿದ್ದಾನೆ. ತೀವ್ರ ನೋವಿನಿಂದ ಕೂಗಿಕೊಂಡ ತಾಹಿರಾ ನೆಲಕ್ಕೆ ಬಿದ್ದಿದ್ದಾರೆ. ತಾಹಿರಾ ಅವರ ಬೊಬ್ಬೆ ಕೇಳಿ ಅವರ ಗಂಡ ಬರುತ್ತಿರುವುದನ್ನು ಕಂಡ ಶಫಿವುಲ್ಲಾ, ತಾಹಿರಾ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಸ್ಥಳದಿಂದ ತೊಲಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ತಾಹಿರಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2025, ಕಲಂ 118(1), 352, 351(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Leave a Reply