ಗಂಗೊಳ್ಳಿ, ಮೇ 07, 2025: ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಮಾಣಿಕೊಳಲು ಬದ್ರಿಯ ಜುಮ್ಮಾ ಮಸೀದಿಯ ಖಬರ್‌ಸ್ಥಾನದಲ್ಲಿ ಅಳವಡಿಸಲಾಗಿದ್ದ ಗ್ರಾನೈಟ್ ಕಲ್ಲಿನ ನಾಮಫಲಕಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ಎಂ. ಇಬ್ರಾಹಿಂ, ಹಕ್ಲಾಡಿ ಗ್ರಾಮ, ಕಳೆದ ಮೂರು ವರ್ಷಗಳಿಂದ ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಸೀದಿಯಿಂದ ಸುಮಾರು 500 ಮೀಟರ್ ದೂರದ ಕಟ್ಟಿನಮಕ್ಕಿ-ನೂಜಾಡಿ ಸಂಪರ್ಕ ರಸ್ತೆಯ ಬದಿಯಲ್ಲಿರುವ ಖಬರ್‌ಸ್ಥಾನದಲ್ಲಿ 23 ಸಮಾಧಿಗಳಿದ್ದು, ಇವುಗಳಿಗೆ ಗ್ರಾನೈಟ್ ಕಲ್ಲಿನ ನಾಮಫಲಕಗಳನ್ನು ಅಳವಡಿಸಲಾಗಿತ್ತು.
ಮೇ 02, 2025 ರಂದು ಮಧ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ಪ್ರಾರ್ಥನೆ ಸಲ್ಲಿಸಿ ವಾಪಸ್ ಆಗಿದ್ದರು. ಆದರೆ, ಮೇ 06, 2025 ರಂದು ಬೆಳಿಗ್ಗೆ 11:00 ಗಂಟೆಗೆ ಮತ್ತೆ ಪ್ರಾರ್ಥನೆಗೆ ತೆರಳಿದಾಗ, ಖಬರ್‌ಸ್ಥಾನದ ಎಂಟು ಸಮಾಧಿಗಳಿಗೆ ಅಳವಡಿಸಲಾಗಿದ್ದ ಗ್ರಾನೈಟ್ ನಾಮಫಲಕಗಳನ್ನು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಪ್ರವೇಶಿಸಿ ಧ್ವಂಸಗೊಳಿಸಿರುವುದು ಕಂಡುಬಂದಿದೆ. ಈ ಘಟನೆಯಿಂದ ಸುಮಾರು 12,500 ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.
ಈ ಬಗ್ಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2025, ಕಲಂ 299, 329(3), 324(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Leave a Reply