ಉಡುಪಿ: ಕೇಂದ್ರ ಸರ್ಕಾರವು ಜಾರಿಗೊಳಿಸಲು ಯೋಜಿಸಿರುವ ಸಂವಿಧಾನ ವಿರೋಧಿ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮೇ 13ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಮುಂದೂಡಿದೆ ಎಂದು ಮುಸ್ತಾಕ್ ಹೆನ್ನಾಬೈಲ್ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತ್ಯತೀತ ಮನೋಭಾವದ ಸಂವಿಧಾನ ಪ್ರೇಮಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು, ಚಿಂತಕರು ಮತ್ತು ಹೋರಾಟಗಾರರು ಒಗ್ಗೂಡಿ, ಹಲವು ಸಿದ್ಧತಾ ಸಭೆಗಳನ್ನು ನಡೆಸಿ, ಪೊಲೀಸ್ ಅನುಮತಿಯೊಂದಿಗೆ ಪ್ರಚಾರ ಕಾರ್ಯ ನಡೆಸಿದ್ದರು. ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸುವ ನಿರೀಕ್ಷೆಯಿತ್ತು. ಪ್ರಚಾರದ ವೇಳೆ ಸಮಾಜದ ಎಲ್ಲ ವರ್ಗದವರಿಂದ ಅಗಾಧ ಬೆಂಬಲ ವ್ಯಕ್ತವಾಗಿತ್ತು,” ಎಂದರು.
“ಆದರೆ, ಕಾಶ್ಮೀರದ ಪೆಹಲ್ಗಾಮಿನಲ್ಲಿ ನಡೆದ ಉಗ್ರವಾದಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರವಾದಿ ನೆಲೆಗಳ ಮೇಲೆ ನಿಖರ ವೈಮಾನಿಕ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬಲವನ್ನು ನೀಡುವ ಜವಾಬ್ದಾರಿ ನಮ್ಮದು. ಆದ್ದರಿಂದ, ದೇಶದ ವರ್ಚಸ್ಸನ್ನು ಕಾಪಾಡುವ ಸದುದ್ದೇಶದಿಂದ ಪ್ರತಿಭಟನೆಯನ್ನು ಮುಂದೂಡಲು ಸಮಿತಿಯು ನಿರ್ಧರಿಸಿದೆ,” ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಗೇಶ್ ಉದ್ಯಾವರ, ರಫೀಕ್ ಗಂಗೊಳ್ಳಿ, ರಮೇಶ್ ಕಾಂಚನ್, ರಿಯಾಝ್ ಕೋಡಿ, ಇದ್ರಿಸ್ ಹೂಡೆ, ಅಝೀಜ್ ಉದ್ಯಾವರ, ಇಸ್ಮಾಯಿಲ್ ಕಟಪಾಡಿ, ಅಫ್ವಾನ್ ಹೂಡೆ, ಸುಂದರ್ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು.
Leave a Reply