ಕಾಪು, ಮೇ 10: ಉಡುಪಿ ಜಿಲ್ಲೆಯ ಕಾಪು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ಮೂವರು ಸಹೋದರರ ಮೇಲೆ ಶಾರೀಕ್ ಎಂಬಾತನ ನೇತೃತ್ವದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ದಿನಾಂಕ 09/05/2025 ರಂದು ನಡೆದಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ಬಾಷಾಸಾಬ್ (20), ಕಲಬುರ್ಗಿ ಮೂಲದವರಾಗಿದ್ದು, ಪ್ರಸ್ತುತ ತಮ್ಮ ಪತ್ನಿ, ತಾಯಿ ಹಾಗೂ ಇಬ್ಬರು ತಮ್ಮಂದಿರಾದ ನಬೀಸಾಬ್ (19) ಮತ್ತು ಮಹಮ್ಮದ್ ರಫೀಕ್ (18) ಜೊತೆಗೆ ಮೂಡನಿಡಂಬೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮೂವರೂ ಸಹೋದರರು ಉಡುಪಿ ಜಿಲ್ಲೆಯ ವಿವಿಧ ಸಂತೆಗಳಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.
ದಿನಾಂಕ 09/05/2025 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ, ಬಾಷಾಸಾಬ್ ಮತ್ತು ಮಹಮ್ಮದ್ ರಫೀಕ್ ಕಾಪು ಮಾರುಕಟ್ಟೆಯಲ್ಲಿ ವಾಹನದಿಂದ ಹಣ್ಣುಗಳನ್ನು ಇಳಿಸುತ್ತಿದ್ದ ವೇಳೆ, ಪಿರ್ಯಾದಿದಾರರ ಬಾಡಿಗೆ ಮನೆಯ ಸಮೀಪದ ನಿವಾಸಿಯಾದ ಶಾರೀಕ್ ಎಂಬಾತ KA-19-MF-2667 ಸ್ವಿಫ್ಟ್ ಕಾರಿನಲ್ಲಿ ಇಬ್ಬರು ಅಪರಿಚಿತರೊಂದಿಗೆ ಆಗಮಿಸಿದ್ದಾನೆ. ಶಾರೀಕ್, ಬಾಷಾಸಾಬ್ ಮತ್ತು ರಫೀಕ್ ರವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ್ದಾನೆ. ಆಗ ಇಬ್ಬರೂ ಕಾರಿನಲ್ಲಿ ಕುಳಿತಾಗ, ಶಾರೀಕ್ ಕಾರನ್ನು ಉಡುಪಿಯತ್ತ ಚಲಾಯಿಸುವಂತೆ ತನ್ನ ಸಹಚರನಿಗೆ ಸೂಚಿಸಿದ್ದಾನೆ.
ಕಾರಿನಲ್ಲಿ ಚಲಿಸುವಾಗ, ಶಾರೀಕ್ ಮತ್ತು ಇನ್ನೊಬ್ಬ ವ್ಯಕ್ತಿ ಬಾಷಾಸಾಬ್‌ರಿಗೆ ಹೊಡೆದಿದ್ದು, ಶಾರೀಕ್ ತನ್ನ ಬಳಿಯಿದ್ದ ಚಾಕುವನ್ನು ರಫೀಕ್‌ಗೆ ತೋರಿಸಿ ಬೆದರಿಕೆ ಹಾಕಿದ್ದಾನೆ. ನಂತರ ಉಡುಪಿ APMC ಮಾರುಕಟ್ಟೆಗೆ ತೆರಳಿ, ಅಲ್ಲಿದ್ದ ನಬೀಸಾಬ್‌ನನ್ನೂ ಕಾರಿನಲ್ಲಿ ಕರೆತಂದ ಆರೋಪಿಗಳು, ಮೂವರನ್ನೂ ಮಲ್ಪೆ ಬೀಚ್‌ಗೆ ಕರೆದೊಯ್ದು ಕೈಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ.
ಅಲ್ಲಿಂದ ಅಂಬಾಗಿಲು ಮಾರ್ಗವಾಗಿ ಮಣಿಪಾಲಕ್ಕೆ ತೆರಳುವಾಗ, ಶಾರೀಕ್ ರಫೀಕ್ ಜೇಬಿನಲ್ಲಿದ್ದ 1,500 ರೂ. ಹಣವನ್ನು ಕಸಿದುಕೊಂಡು, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ನಂತರ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ, ಡಿ.ಸಿ ಆಫೀಸ್ ಬಳಿ ಕರ್ಕೊಂಡು ಹೋಗಿದ್ದಾರೆ.
ಮಣಿಪಾಲದ ಕಾಡಿನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಅಲ್ಲಿ ಕೂಡ ಬೆದರಿಕೆಯನ್ನು ಮುಂದುವರಿಸಿದ್ದಾರೆ. ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಅಂಬಾಗಿಲಿಗೆ ಮರಳಿದ ಆರೋಪಿಗಳ ಜೊತೆಗಿದ್ದ ಇಬ್ಬರು ಅಪರಿಚಿತರು ಕಾರಿನಿಂದ ಇಳಿದುಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025, ಕಲಂ 140(3), 115(2), 352, 351(2) R/w 3(5) BNS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Leave a Reply