ಉಡುಪಿ, ಮೇ. 12: ಕರ್ನಾಟಕದ ಮನೆ ಮಾತಾಗಿದ್ದ ‘ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ(34) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕಾರ್ಕಳದ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮೇ 12 ಮುಂಜಾನೆ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. ಬಳಿಕ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನು ರಾಕೇಶ್ ಅವರಿಗೆ ಲೋ ಬಿಪಿಯಿಂದ ಸಹ ಸಮಸ್ಯೆ ಕಾಣಿಸಿಕೊಂಡಿತ್ತು. ಸುಸ್ತು ಅಂತ ಸ್ನೇಹಿತರ ಬಳಿ ಹೇಳಿದಾಗ ತಕ್ಷಣ ರಾಕೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಾಕೇಶ್ ನಿಧನಕ್ಕೆ ನಟಿ ರಕ್ಷಿತಾ ಪ್ರೇಮ್, ನಟರೂ ಹಾಗೂ ರಾಕೇಶ್ ಆಪ್ತರೂ ಆದ ಶಿವರಾಜ್ ಕೆಆರ್ ಪೇಟೆ, ಗೋವಿಂದೇ ಗೌಡ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ರಾಕೇಶ್ ಅವರು ಹಲವು ವರ್ಷಗಳಿಂದಲೂ ಅವರ ರಂಗಭೂಮಿ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಅವರು ಕನ್ನಡದ ‘ಪೈಲ್ವಾನ್’, ‘ಇದು ಎಂತ ಲೋಕವಯ್ಯ’ ಸಿನಿಮಾಗಳಲ್ಲಿ, ಹಾಗೂ ತುಳುವಿನ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’, ‘ಪಮ್ಮನ್ನೆ ದಿ ಗ್ರೇಟ್’, ‘ಉಮಿಲ್’ ಮತ್ತು ‘ಇಲ್ಲೊಕ್ಕೆಲ್’ ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.
Leave a Reply