ಪಡುಬಿದ್ರಿ, ಮೇ 13: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ಮೋಟಾರ್‌ಸೈಕಲ್ ಅಪಘಾತದಲ್ಲಿ 14 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ದಿನಾಂಕ 11/05/2025 ರಂದು ಕಾಪು ತಾಲೂಕಿನ ತೆಂಕ ಗ್ರಾಮದ ಎರ್ಮಾಳು ಗರಡಿಯ ಬಳಿ ನಡೆದಿದೆ.
ಪಡುಬಿದ್ರಿ ನಿವಾಸಿ ಅಬ್ದುಲ್ ಅಜೀಜ್ ತಮ್ಮ ಮೋಟಾರ್‌ಸೈಕಲ್ (KA-20 ED-7571) ನಲ್ಲಿ ತಮ್ಮ ಮಗ ಶೇಖ್ ಅಬ್ದುಲ್ ಸೈಫಾನ್ (14) ರನ್ನು ಸಹಸವಾರನಾಗಿ ಕೂರಿಸಿಕೊಂಡು ಪಡುಬಿದ್ರೆಯಿಂದ ಉಚ್ಚಿಲ ಕಡೆಗೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಎರ್ಮಾಳು ಗರಡಿಯ ಎದುರು ತಲುಪಿದಾಗ, ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದಾಗ ವಾಹನದ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಮೋಟಾರ್‌ಸೈಕಲ್ ರಸ್ತೆಯ ಎಡಬದಿಯ ಕಪ್ಪು ಕಂಬಕ್ಕೆ ಡಿಕ್ಕಿ ಹೊಡೆದು, ಸವಾರರು ವಾಹನ ಸಮೇತ ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ತೀವ್ರತೆಯಿಂದ ಮೋಟಾರ್‌ಸೈಕಲ್‌ಗೆ ಬೆಂಕಿ ಹೊತ್ತಿಕೊಂಡು ಭಾಗಶಃ ಸುಟ್ಟುಹೋಗಿದೆ.
ಅಪಘಾತದಲ್ಲಿ ಸವಾರ ಅಬ್ದುಲ್ ಅಜೀಜ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಹಸವಾರ ಶೇಖ್ ಅಬ್ದುಲ್ ಸೈಫಾನ್‌ಗೆ ತಲೆಗೆ ಗಂಭೀರ ಗಾಯ ಹಾಗೂ ಎದೆಗೆ ತರಚಿದ ಗಾಯವಾಗಿತ್ತು. ಗಾಯಾಳು ಬಾಲಕನನ್ನು ತಕ್ಷಣವೇ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 12:30 ಗಂಟೆಗೆ ಮೃತಪಟ್ಟಿದ್ದಾನೆ.
ಕಾಪು ತಾಲೂಕಿನ ಅಕ್ರಂ (47) ಎಂಬವರು ನೀಡಿದ ದೂರಿನ ಆಧಾರದ ಮೇಲೆ, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2025ರಡಿಯಲ್ಲಿ ಕಲಂ 281, 125(a), 106(1) ಬಿಎನ್‌ಎಸ್‌ನಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
Leave a Reply