ಶಿರ್ವ, ಮೇ 16: ಕಾಪು ತಾಲೂಕಿನ ಬೆಳಪು ಗ್ರಾಮದ ನಿವಾಸಿ ಶ್ರೀಮತಿ ಸೀಮಾ (32) ಎಂಬ ಮಹಿಳೆಯ ಮನೆಯಲ್ಲಿ ಶಿಶು ಅಪಹರಣದ ಪ್ರಯತ್ನ ನಡೆದಿರುವ ಘಟನೆ ದಿನಾಂಕ 16/05/2025 ರಂದು ಮಧ್ಯಾಹ್ನ ಸುಮಾರು 1:40 ಗಂಟೆಗೆ ನಡೆದಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಇಬ್ಬರು ಅಪರಿಚಿತ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರೆ ಶ್ರೀಮತಿ ಸೀಮಾ ಅವರು ಕಾರ್ಯಕ್ರಮವೊಂದಕ್ಕಾಗಿ ಮಜೂರಿಗೆ ಹೋಗಿದ್ದ ವೇಳೆ, ಮನೆಯಲ್ಲಿ ತಫೀಮಾ ಹಾಗೂ ಆಕೆಯ ಮಗ ಅಸ್ಲಾನ್ ಇದ್ದರು. ಮನೆಯಿಂದ ಹೊರಡುವಾಗ ಸೀಮಾ ಅವರು ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿದ್ದರು. ಕಾರ್ಯಕ್ರಮದಲ್ಲಿದ್ದಾಗ ಘಟನೆಯ ವಿಚಾರ ತಿಳಿದು ತಕ್ಷಣ ಮನೆಗೆ ಬಂದ ಸೀಮಾ, ತಫೀಮಾಳಿಂದ ವಿವರ ಕೇಳಿದಾಗ ಆಘಾತಕಾರಿ ಮಾಹಿತಿ ಬಹಿರಂಗವಾಯಿತು.
ತಫೀಮಾ ಅವರ ಹೇಳಿಕೆಯ ಪ್ರಕಾರ, ಮಧ್ಯಾಹ್ನ 1:50 ಗಂಟೆ ಸುಮಾರಿಗೆ ಆಕೆ ಮಗುವನ್ನು ಹಾಲ್‌ನಲ್ಲಿರುವ ಜೋಳಿಗೆಯಲ್ಲಿ ಮಲಗಿಸಿ ವಾಷ್‌ರೂಮ್‌ಗೆ ಹೋಗಿದ್ದರು. ವಾಪಸ್ ಬಂದಾಗ ಕಪ್ಪು ಬುರ್ಕಾ ಧರಿಸಿದ ಇಬ್ಬರು ವ್ಯಕ್ತಿಗಳು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದರು. ಇವರಲ್ಲಿ ಒಬ್ಬ ಗಿಡ್ಡ ವ್ಯಕ್ತಿಯು ಜೋಳಿಗೆಯಲ್ಲಿದ್ದ ಮಗುವನ್ನು ಎತ್ತಲು ಯತ್ನಿಸಿದ್ದಾನೆ. ಇದನ್ನು ಕಂಡ ತಫೀಮಾ ಜೋರಾಗಿ ಕಿರುಚಿ, ಮಗುವನ್ನು ರಕ್ಷಿಸಲು ಮುಂದಾದಾಗ, ಆರೋಪಿತನು ಮಗುವನ್ನು ಜೋಳಿಗೆಗೆ ಹಾಕಿದನು. ಈ ವೇಳೆ ಮಗು ಜೋರಾಗಿ ಕಿರುಚಿತು.
ತಫೀಮಾ ದೊಡ್ಡ ವ್ಯಕ್ತಿಯ ಕೈಯನ್ನು ಬಿಗಿಯಾಗಿ ಹಿಡಿದಾಗ, ಗಿಡ್ಡ ವ್ಯಕ್ತಿಯು ಯಾವುದೋ ಸಾಧನದಿಂದ ಆಕೆಯ ಬಲಗೈಗೆ ಗೀಚಿ, ತರಚಿದ ಗಾಯವಾಗುವಂತೆ ಮಾಡಿದ್ದಾನೆ. ಬಳಿಕ ಆತ ತಫೀಮಾಳ ತಲೆಯನ್ನು ಗೋಡೆಗೆ ಬಲವಾಗಿ ತಳ್ಳಿದ್ದಾನೆ. ತಫೀಮಾ ಜೋರಾಗಿ ಬೊಬ್ಬೆ ಹೊಡೆದುದನ್ನು ಗಮನಿಸಿ, ಇಬ್ಬರು ಆರೋಪಿತರು ಮನೆಯಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ತಫೀಮಾಳನ್ನು ಶಿರ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ವೈದ್ಯರು ಆಕೆಯನ್ನು ಪರೀಕ್ಷಿಸಿ, ಹೊರರೋಗಿಯಾಗಿ ಚಿಕಿತ್ಸೆಗೆ ಒಳಪಡಿಸಿದ್ದಾರೆ.
ಈ ಘಟನೆಯಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ಬುರ್ಕಾ ಧರಿಸಿ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಶಿಶುವನ್ನು ಅಪಹರಣ ಮಾಡಲು ಯತ್ನಿಸಿದ್ದಲ್ಲದೇ, ತಫೀಮಾಳಿಗೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2025 ರಂತೆ ಕಲಂ 137(2), 62, 329(4), 118(1), 3(5) BNS 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿತರಿಗಾಗಿ ತನಿಖೆ ಆರಂಭಿಸಿದ್ದಾರೆ.
Leave a Reply