ಕುಂದಾಪುರ, ಮೇ 24, 2025: ಕುಂದಾಪುರದ ಪ್ರಧಾನ ಅಂಚೆ ಕಚೇರಿಯಲ್ಲಿ ‘ಪಂಚಗಂಗಾವಳಿ’ ಶಾಶ್ವತ ಅಂಚೆ ಮೊಹರು ಶುಕ್ರವಾರ ಬಿಡುಗಡೆಗೊಂಡಿತು. ಉಡುಪಿ ವಿಭಾಗದ ಅಂಚೆ ಇಲಾಖೆಯ ಅಧೀಕ್ಷಕ ರಮೇಶ ಪ್ರಭು ಅವರು ಅತಿಥಿಗಳ ಸಮ್ಮುಖದಲ್ಲಿ ಈ ಮೊಹರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ರಮೇಶ ಪ್ರಭು ಮಾತನಾಡಿ, “ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ‘ಪಂಚಗಂಗಾವಳಿ’ ಬಗ್ಗೆ ತೀವ್ರ ಆಸಕ್ತಿ ತೋರಿದ್ದರು. ಕುಂದಾಪುರದ ಮಹತ್ವವನ್ನು ಎತ್ತಿ ತೋರಿಸುವ ಸಲುವಾಗಿ ಈ ಮೊಹರನ್ನು ರಚಿಸುವ ಆಶಯ ನಮ್ಮದಾಗಿತ್ತು. ಕುಂದಾಪುರ ತಾಲೂಕಿನಲ್ಲಿ ಹರಿಯುವ ‘ಪಂಚಗಂಗಾವಳಿ’ ನದಿಗಳು ದೇಶದಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದಿವೆ ಎಂಬುದನ್ನು ಗಮನಿಸಿದ ಬಳಿಕ ಇಲಾಖೆಯ ಒಪ್ಪಿಗೆ ದೊರೆಯಿತು. ಈ ಮೊಹರು ಅಂಚೆ ಚೀಟಿ ಸಂಗ್ರಾಹಕರಿಗೂ ಆನಂದ ತಂದಿದೆ. ಈ ಮೊಹರನ್ನು ಅಂಚೆ ಕಾರ್ಡು ಮತ್ತು ಕವರ್‌ಗಳಿಗೆ ಬಳಸುವ ಮೂಲಕ ಜನಪ್ರಿಯಗೊಳಿಸಬಹುದು,” ಎಂದರು.
ಮೊಹರಿನ ರಚನೆಗೆ ಸಹಕಾರ ನೀಡಿದ ಪಂಚಗಂಗಾವಳಿ ಸಮಿತಿಯ ಸಂಚಾಲಕ ಯು. ಎಸ್. ಶೆಣೈ ಹಾಗೂ ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಉಡುಪಿಯವರನ್ನು ರಮೇಶ ಪ್ರಭು ಅಭಿನಂದಿಸಿದರು. “ಜಿಲ್ಲೆಯಲ್ಲಿ ಒಂಬತ್ತು ಪ್ರಮುಖ ಕೇಂದ್ರಗಳಿಗೆ ಸಂಬಂಧಿಸಿದ ಮೊಹರುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ‘ಪಂಚಗಂಗಾವಳಿ’ 10ನೇ ಮೊಹರಾಗಿದೆ. ಮುಂದಿನ ದಿನಗಳಲ್ಲಿ ಪಂಚಗಂಗಾವಳಿಯ ಚಿತ್ರವಿರುವ ಅಂಚೆ ಕಾರ್ಡನ್ನೂ ಬಿಡುಗಡೆ ಮಾಡಲಿದ್ದೇವೆ. ಕುಂದಾಪುರ ಅಂಚೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮ ಸೇವೆಯನ್ನು ನೀಡುತ್ತಿದ್ದು, ಈ ಮೊಹರು ಸಾರ್ವಜನಿಕರಿಗೆ ತಲುಪುವಂತೆ ಮಾಡಲಿದ್ದಾರೆ,” ಎಂದು ತಿಳಿಸಿ ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು.
ಹಿರಿಯ ವಕೀಲ ಹಾಗೂ ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಮಾತನಾಡಿ, “ಅಂಚೆ ಇಲಾಖೆಯ ಸೇವೆ ಶ್ಲಾಘನೀಯವಾಗಿದೆ. ಸಾರ್ವಜನಿಕರ ಹಿತಾಸಕ್ತಿಗೆ ತಕ್ಷಣವೇ ಸ್ಪಂದಿಸುವ ಈ ಇಲಾಖೆಯು ಕುಂದಾಪುರಕ್ಕೆ ಮಹತ್ವ ನೀಡಿ ‘ಪಂಚಗಂಗಾವಳಿ’ ಮೊಹರನ್ನು ಬಿಡುಗಡೆಗೊಳಿಸಿರುವುದು ಪ್ರಶಂಸನೀಯ. ಇದು ಈ ಪರಿಸರದ ಅಭಿವೃದ್ಧಿಗೆ ಪ್ರೇರಣೆಯಾಗಲಿ,” ಎಂದರು. ವಿದೇಶದಲ್ಲಿಯೂ ಭಾರತೀಯ ಅಂಚೆ ಚೀಟಿಗಳಿಗೆ ಇರುವ ಗೌರವವನ್ನು ಅವರು ವಿವರಿಸಿದರು.
ಯು. ಎಸ್. ಶೆಣೈ ಮಾತನಾಡಿ, “ವಿದೇಶಿ ಮತ್ತು ಸ್ವದೇಶಿ ಸಂಶೋಧಕರು, ಇತಿಹಾಸಗಾರರು ಪಂಚಗಂಗಾವಳಿ ನದಿಗಳ ವೈಶಿಷ್ಟ್ಯವನ್ನು ದಾಖಲಿಸಿದ್ದಾರೆ. ಮುಂದಿನ ಪೀಳಿಗೆಗೆ ನಮ್ಮ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ಕಾರಣದಿಂದ 15 ವರ್ಷಗಳಿಂದ ಪಂಚಗಂಗಾವಳಿ ಅಭಿಯಾನ ನಡೆಸುತ್ತಿದ್ದೇವೆ. ಅಂಚೆ ಇಲಾಖೆಯು ಸೂಕ್ತ ಸಮಯದಲ್ಲಿ ಈ ಮೊಹರನ್ನು ಬಿಡುಗಡೆಗೊಳಿಸಿರುವುದು ಸಂತೋಷ ತಂದಿದೆ. ಈ ವಿನ್ಯಾಸಕ್ಕೆ ಸಹಕರಿಸಿದ ಕಲಾವಿದ ಕೇಶವ ಸಸಿಹಿತ್ಲು, ಪ್ರೇರಣೆ ನೀಡಿದ ಕೃಷ್ಣಯ್ಯ, ಮತ್ತು ಅಂಚೆ ಅಧೀಕ್ಷಕ ರಮೇಶ ಪ್ರಭು ಅವರಿಗೆ ಅಭಿನಂದನೆಗಳು. ಅಂಚೆ ಚೀಟಿ ಸಂಗ್ರಹದ ಹವ್ಯಾಸವನ್ನು ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿಯ ರೀತಿಯಲ್ಲಿ ಪ್ರೇರೇಪಿಸಬೇಕು,” ಎಂದರು.
ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಮಾತನಾಡಿ, “ಉಡುಪಿ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಸಂಬಂಧಿಸಿದ ಮೊಹರುಗಳು ಮತ್ತು ಅಂಚೆ ಚೀಟಿಗಳು ಬಿಡುಗಡೆಯಾಗುವಂತೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕೆಲವೊಮ್ಮೆ ಕಾರಣಾಂತರಗಳಿಂದ ವಿಳಂಬವಾಗುತ್ತದೆ, ಅಥವಾ ನಿರೀಕ್ಷಿತ ವಿನ್ಯಾಸ ಬಿಡುಗಡೆಯಾಗದಿರಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸಂತೋಷ ತರುತ್ತದೆ. ‘ಪಂಚಗಂಗಾವಳಿ’ ಮೊಹರಿನ ಬಿಡುಗಡೆ ತೃಪ್ತಿಕರವಾಗಿದೆ,” ಎಂದರು.
ಕುಂದಾಪುರ ಪ್ರಧಾನ ಅಂಚೆ ಪಾಲಕ ಜಿ. ಎಸ್. ಮರಕಾಲ ಅತಿಥಿಗಳನ್ನು ಸನ್ಮಾನಿಸಿದರು. ಉಡುಪಿ ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಧಾನ ಅಂಚೆ ಪಾಲಕಿ ಸೌಮ್ಯಶ್ರೀ ಸ್ವಾಗತಿಸಿದರು. ಪೂರ್ಣಿಮಾ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು, ಮತ್ತು ಸಹಾಯಕ ಅಂಚೆ ಅಧೀಕ್ಷಕ ದಯಾನಂದ ವಂದನೆ ಸಲ್ಲಿಸಿದರು.
Leave a Reply