ಕೊಲ್ಲೂರು ಗಂಗೆ ಕೊರಗ ಮನೆ ಧ್ವಂಸ ಪ್ರಕರಣ- ಕುಟುಂಬಕ್ಕೆ 10 ಸೆಂಟ್ಸ್ ಜಾಗ ಮಂಜೂರು: ಡಿಸಿ ಆದೇಶ

ಕುಂದಾಪುರ, ಮೇ 24: ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಎಂಬಲ್ಲಿ ಎ.17ರಂದು ನಡೆದ ಮನೆ ಧ್ವಂಸ ಪ್ರಕರಣದ ಸಂತ್ರಸ್ತ ಕೊರಗ ಕುಟುಂಬಕ್ಕೆ ಪುನರ್ವಸತಿಗಾಗಿ 10 ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

ಕಳೆದ 40ವರ್ಷಗಳಿಂದ ಕಲ್ಯಾಣಿಗುಡೆಯಲ್ಲಿ ವಾಸವಾಗಿದ್ದ ಗಂಗೆ ಕೊರಗ ಅವರ ಮನೆಯನ್ನು ಕೊಲ್ಲೂರು ಶ್ರೀಜಗದಂಭಾ ಸೇವಾ ಟ್ರಸ್ಟ್‌ನವರು ಏಕಾಏಕಿ ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳು ಹಾಗೂ ಕೊರಗಾಭಿವೃದ್ಧಿ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಈ ಸಂಬಂಧ ಟ್ರಸ್ಟ್ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಆದೇಶದಲ್ಲಿ ಏನಿದೆ?: ಗಂಗೆ ಕೊರಗ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು ಅವರ ವಾಸ್ತವ್ಯದ ಮನೆಯನ್ನು ಧ್ವಂಸ ಮಾಡಿರುವುದರಿಂದ ಭೂ ರಹಿತರಾಗಿದ್ದು, ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡಲು 10 ಎಕ್ರೆ ಸೆಂಟ್ಸ್ ದರ್ಖಾಸ್ತು ಮಂಜೂರು ಮಾಡುವ ಬಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಅದರಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 5(ಎ)ರಡಿ ತಾಲ್ಲೂಕಿನಲ್ಲಿ ಶೇ.50ಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಅನುಸೂಚಿತ ಜಾತಿಯ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಭೂಮಿಗಳನ್ನು ಮಂಜೂರಾತಿಗೆ ಮೀಸಲಿಡಲು ಅವಕಾಶ ಕಲ್ಪಿಸಿರುವಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಮಂಜೂರಾತಿ ನಿಯಮಗಳು, 1969 ರ ನಿಯಮ 12(4) ರಂತೆ ಭೂ ಮೌಲ್ಯವನ್ನು ವಿನಾಯಿತಿಗೊಳಿಸಿ ಷರತ್ತುಗಳಿಗೆ ಒಳಪಟ್ಟು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ 10 ಸೆಂಟ್ಸ್ ಜಮೀನನ್ನು ಪರಿಶಿಷ್ಟ ಪಂಗಡದ ಗಂಗೆ ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಲು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ

Comments

Leave a Reply

Your email address will not be published. Required fields are marked *