ಸೆಂಟ್ರಲ್ ಜೈಲ್ ನಲ್ಲಿ ನಾಲ್ಕು ಚಾಕು, ನಗದು, ಮೊಬೈಲ್, ಇಂಡಕ್ಷನ್ ಸ್ಟೌವ್ ಪತ್ತೆ: ನಾಲ್ವರು ಸಜಾಬಂಧಿಗಳು ಸೇರಿ ಭದ್ರತಾ ಸಿಬ್ಬಂದಿಗಳ ವಿರುದ್ಧ ಎಫ್ಐಆರ್

ಬೆಂಗಳೂರು, ಮೇ 25, 2025: ನಿಷೇಧಿತ ವಸ್ತುಗಳನ್ನು ಬಳಸುತ್ತಿರುವ ಮಾಹಿತಿ ಮೇರೆಗೆ ನಗರದ ಜೈಲಿನ ಮೇಲೆ ಆಗ್ನೇಯ ವಿಭಾಗದ ಪೊಲೀಸರ ತಂಡ ಏಕಾಏಕಿ ದಾಳಿ ನಡೆಸಿ ಅಕ್ರಮವಾಗಿ ಇರಿಸಲಾಗಿದ್ದ ನಾಲ್ಕು ಚಾಕು ಒಂದು ಮೊಬೈಲ್, ಎಲೆಕ್ಟ್ರಾನಿಕ್ ಇಂಡಕ್ಷನ್ ಸ್ಟೌವ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ನಿಷೇಧಿತ ವಸ್ತುಗಳು ಪತ್ತೆ ಸಂಬಂಧ ಶಿಕ್ಷಾಬಂಧಿಗಳಾದ ಚೆಲುವ, ಇರ್ಷಾದ್, ಆಕಾಶ್, ಮಾರುತಿ ಹಾಗೂ ಜೈಲು ಭದ್ರತಾ ಸಿಬ್ಬಂದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇತ್ತೀಚೆಗೆ ಜೈಲಿನ ಶಿಕ್ಷಾಬಂಧಿಗಳ ಬ್ಯಾರಕ್ ವೊಂದರಲ್ಲಿ ತಿಂಡಿ ವಿಚಾರವಾಗಿ ಸಜಾಬಂಧಿಗಳ ನಡುವೆ ಮಾರಾಮಾರಿ ನಡೆದಿತ್ತು. ಅಲ್ಲದೆ, ಜೈಲಿನಲ್ಲಿ ಅವ್ಯವಹಾರಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಡಿಸಿಪಿ ಸಾರಾಫಾತಿಮಾ ಅವರ ಸೂಚನೆ ಮೇರೆಗೆ ಹುಳಿಮಾವು, ಬಂಡೆಪಾಳ್ಯ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಪರಪ್ಪನ ಅಗ್ರಹಾರ ಠಾಣೆ ಇನ್ ಸ್ಪೆಕ್ಟರ್ ಒಳಗೊಂಡ ಮೂರು ವಿಶೇಷ ತಂಡ ಶುಕ್ರವಾರ ದಾಳಿ ನಡೆಸಿತ್ತು.

ತಪಾಸಣೆ ವೇಳೆ ಶಿಕ್ಷಾಬಂಧಿ ವಿಭಾಗದ ಬಿ- ಬ್ಯಾರಕ್ ನಲ್ಲಿದ್ದ ಅಪರಾಧಿ ಚೆಲುವ 7 ಸಾವಿರ ನಗದು, ಸಿ ಬ್ಯಾರಕ್ ಲ್ಲಿದ್ದ ಇರ್ಷಾದ್ ಬಳಿ ಒಂದು ಮೊಬೈಲ್ ಫೋನ್, ಆಕಾಶ್ ಎಂಬಾತನ ಬಳಿ 2 ಸಾವಿರ ನಗದು, ಬಾತ್ ರೂಮ್ ನಲ್ಲಿ ಇಟ್ಟಿದ್ದ 5 ಸಾವಿರ ನಗದು, ಮತ್ತೋರ್ವ ಕೈದಿ ಮಾರುತಿ ಬಳಿ 2,500 ನಗದು ಹಣ ಪತ್ತೆಯಾಗಿದೆ. ಇದೇ ವೇಳೆ ಎಲೆಕ್ಟ್ರಾನಿಕ್ ಇಂಡೆಕ್ಷನ್ ಸ್ಟೌವ್, 4 ಚಾಕು ಹಾಗೂ ಒಂದು ಮೊಬೈಲ್ ಸಿಕ್ಕಿದ್ದು, ಇವುಗಳನ್ನ ವಶಕ್ಕೆ ಪಡೆದು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಜೈಲು ಭದ್ರತಾ ಸಿಬ್ಬಂದಿಗಳ ಕೈವಾಡ ಶಂಕೆ: ಪತ್ತೆಯಾಗಿರುವ ವಸ್ತುಗಳೆಲ್ಲವೂ ನಿಷೇಧಿತವಾಗಿದ್ದರೂ ಕೈದಿಗಳು ಬಳಕೆಗೆ ಅನುವು ಮಾಡಿಕೊಡುವುದರ ಹಿಂದೆ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ವಸ್ತು ಜೈಲಿನೊಳಗೆ ಹೋಗಬೇಕಾದರೂ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಾರೆ. ಪತ್ತೆಯಾಗಿರುವ ನಿಷೇಧಿತ ವಸ್ತುಗಳ ಹಿಂದೆ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗಳು ಕೈದಿಗಳೊಂದಿಗೆ ಶಾಮೀಲಾಗಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿ- ಸಿಬ್ಬಂದಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *