ಮನೆಗೆ ಬಿಡುವ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಹಠಯೋಗಿ ಲೋಕೇಶ್ವರ ಸ್ವಾಮೀಜಿ ಬಂಧನ

ಚಿಕ್ಕೋಡಿ: ವಿದ್ಯಾರ್ಥಿನಿಯನ್ನು ಮನೆಗೆ ಬಿಡುವುದಾಗಿ ಹೇಳಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಮೇಕಳಿ‌ ಗ್ರಾಮದ ಸ್ವಯಂ ಘೋಷಿತ ಮಠಾಧೀಶನಾದ ಹಠಯೋಗಿ ಲೋಕೇಶ್ವರ ಎಂಬ ಸ್ವಾಮೀಜಿಯನ್ನ ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ಎಸ್​​​​ಪಿ ನೀಡಿದ ವಿವರಣೆ ಹೀಗಿದೆ: ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಯಭಾಗ ತಾಲೂಕಿನ ಮೇಕಳಿ ಗ್ರಾಮದ ಮಠದ ಸ್ವಯಂಘೋಷಿತ ಸ್ವಾಮೀಜಿ ಲೋಕೇಶ್ವರ ಸ್ವಾಮೀಜಿ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ 21ರಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ಲೋಕೇಶ್ವರ ಸ್ವಾಮೀಜಿ ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ.

ಬಂಧಿತ ಸ್ವಾಮೀಜಿ ಮೂಲತಃ ಕಲಬುರಗಿ ಜಿಲ್ಲೆಯವನಾಗಿದ್ದು, ಮೇಕಳಿ ಗ್ರಾಮದಲ್ಲಿ ಮಠ ಕಟ್ಟಿಕೊಂಡು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾನೆ. ಸುತ್ತಮುತ್ತಲಿ ಜನ ಈ ಮಠದ ಭಕ್ತರಿದ್ದು, ಮಠದಲ್ಲಿ ಅನಾರೋಗ್ಯ ಪೀಡಿತರನ್ನು ಕೆಲವರು ಇಲ್ಲೇ ಬಿಟ್ಟು ಹೋಗುತ್ತಿದ್ದರು. ಭಕ್ತರ ನಂಬಿಕೆ ಹಾಗೂ ವಿಶ್ವಾಸವನ್ನು ದುರುಪಯೋಗ ಪಡೆದುಕೊಂಡು ಈ ದುಷ್ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಒಂದು ದಿನ ತಮ್ಮ ಪುತ್ರಿಯನ್ನು ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡು ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಲಾಡ್ಜ್ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆಂದು ಸಂತ್ರಸ್ತೆಯ ಪೋಷಕರು ದೂರು ನೀಡಿದ್ದಾರೆ. ಈ ಆಧಾರದ ಅಡಿ ಸ್ವಯಂಘೋಷಿತ ಸ್ವಾಮೀಜಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದರು.

ದೂರು ದಾಖಲಾಗುತ್ತಿದ್ದಂತೆ ಸ್ವಾಮೀಜಿ ಬಂಧನ: ಕಳೆದ ವಾರವೇ ಮೂಡಲಗಿ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಸ್ವಾಮೀಜಿಯ ಬಂಧನವಾಗಿದೆ. ಭಕ್ತರನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಮನೆಗೆ ಡ್ರಾಪ್ ಕೊಡ್ತಿನಿ ಅಂತ ಬಾಲಕಿಯನ್ನು ರಾಯಚೂರು, ಬಾಗಲಕೋಟೆಗೆ ಕರೆದೊಯ್ದಿದ್ದಾನೆ. ಬಳಿಕ ಲಾಡ್ಜ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಕ್ರೌರ್ಯದ ಬಳಿಕ ಬಾಲಕಿ ಮನೆಗೆ ಬಿಡದೇ ಹೊರ ಜಿಲ್ಲೆಯಲ್ಲಿ ಬಿಟ್ಟು ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಈ ಮೊದಲು ಕೇಸ್ ದಾಖಲಾಗಿತ್ತು. ಬಳಿಕ ಮೂಡಲಗಿ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದೆ. ಆರೋಪಿ ಸ್ವಾಮೀಜಿ ಕೃತ್ಯ ಬಗ್ಗೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಿದ್ದೇವೆ ಎಂದು ಎಸ್ಪಿ ತಿಳಿಸಿದರು.

ಕಾರು ಸಹ ವಶಕ್ಕೆ: ಸ್ವಾಮೀಜಿ ಕಾರನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಈ ಸ್ವಾಮೀಜಿ ಭಕ್ತರನ್ನು ಹೊಂದಿದ್ದು, ಭಕ್ತಿಯ ಕಾರಣಕ್ಕೆ ಮಕ್ಕಳನ್ನು ಸಹ ಅನೇಕ ಭಕ್ತರು ಮಠದಲ್ಲಿ ಬಿಟ್ಟು ಹೋಗುತ್ತಿದ್ದರು ಎಂದು ಎಸ್ಪಿ ಹೇಳಿದರು.

Comments

Leave a Reply

Your email address will not be published. Required fields are marked *