ಬ್ರಹ್ಮಾವರ: ಪರಿಶಿಷ್ಟ ಜಾತಿಯ ಮಹಿಳೆಯ ಮೇಲೆ ದೌರ್ಜನ್ಯ; ಪ್ರಕರಣ ದಾಖಲು

ಬ್ರಹ್ಮಾವರ, ಮೇ 27, 2025: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಕೃಷಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆದ ಘಟನೆ ವರದಿಯಾಗಿದೆ. ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ (39), ಶಿರಿಯಾರ ಗ್ರಾಮದ ನಿವಾಸಿಯಾಗಿದ್ದು, ದಿನಾಂಕ 23/05/2025 ರಂದು ಸಸಿ ವಿತರಣಾ ತರಬೇತಿ ಪ್ರಮಾಣಪತ್ರ ಪಡೆಯಲು ಕೃಷಿ ಕೇಂದ್ರಕ್ಕೆ ತೆರಳಿದ್ದರು.

ವರದಿಯ ಪ್ರಕಾರ, ಸಭಾ ಕಾರ್ಯಕ್ರಮ ಮುಗಿದ ಬಳಿಕ ಆರೋಪಿ 1 ಹಾಗೂ ಆಕೆಯ ಜೊತೆಗಾರರಿಗೆ ಮಾತ್ರ ಪ್ರಮಾಣಪತ್ರ ವಿತರಿಸಲಾಗಿತ್ತು. ಈ ಬಗ್ಗೆ ಅಧಿಕಾರಿ ಆರೋಪಿ 2 ಅವರನ್ನು ಜ್ಯೋತಿ ಪ್ರಶ್ನಿಸಿದಾಗ, ಅವರು ಕೋಪಗೊಂಡು ಆರೋಪಿ 1 ಗೆ ಜ್ಯೋತಿಯನ್ನು “ನೋಡಿಕೊಳ್ಳುವಂತೆ” ಸೂಚಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ, ಜ್ಯೋತಿ ತರಬೇತಿ ಕೊಠಡಿಯ ಹೊರಗೆ ನಿಂತಿರುವಾಗ, ಆರೋಪಿ 1 ಮತ್ತು ಆರೋಪಿ 3 ಎಂಬುವವರು ಜ್ಯೋತಿಯನ್ನು ಕೊಠಡಿಯೊಳಗೆ ತಳ್ಳಿ, ಬಾಗಿಲಿಗೆ ಚಿಲಕ ಹಾಕಿ, “ನೀನು ಅಧಿಕಾರಿಗಳಿಗೆ ಗಾಂಚಲಿ ಮಾಡ್ತಿಯಾ?” ಎಂದು ಕೈಯಿಂದ ಹೊಡೆದು, ಕುರ್ಚಿಯಿಂದ ಹಲ್ಲೆ ಮಾಡಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ . ಬಳಿಕ ಆರೋಪಿ 2 ಕೂಡ ಸ್ಥಳಕ್ಕೆ ಆಗಮಿಸಿ, ಬಾಗಿಲಿಗೆ ಚಿಲಕ ಹಾಕಿ ದೌರ್ಜನ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪಿರ್ಯಾದಿದಾರರು ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2025 ರ ಅಡಿಯಲ್ಲಿ ಕಲಂ 127(2), 115(2), 118(1), 352, 351(2), 114 R/W 3(5) BNS ಹಾಗೂ ಕಲಂ 3(1)(r), 3(1)(s), 3(2)(v-a) SC/ST POA Act ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *