ಹರೀಶ್‌ ಪೂಂಜಾ ಅವರನ್ನು ಶಾಸಕತ್ವದಿಂದ ತೆಗೆಯಬೇಕು: ಮುನೀರ್‌ ಕಾಟಿಪಳ್ಳ ಆಗ್ರಹ

ಬೆಳ್ತಂಗಡಿ, ಮೇ 27, 2025: ಶಾಸಕ ಹರೀಶ್‌ ಪೂಂಜಾ ಅವರು ತಮ್ಮ ದ್ವೇಷ ಭಾಷಣವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ ಸವಾಲು ಹಾಕಿದ್ದಾರೆ. ಬೆಳ್ತಂಗಡಿಯ ಜಮಿಯತುಲ್‌ ಫಲಾಹ್‌ ಸಭಾ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಶಾಸಕ ಹರೀಶ್‌ ಪೂಂಜಾ ಮೈಕ್‌ ಸಿಕ್ಕಾಗ ದ್ವೇಷ ಭಾಷಣ ಮಾಡಿ, ನಂತರ ನ್ಯಾಯಾಲಯದಲ್ಲಿ ಪ್ರಕರಣ ರದ್ದುಗೊಳಿಸುವಂತೆ ಕೋರಿಕೆ ಸಲ್ಲಿಸುತ್ತಾರೆ. ಅವರಿಗೆ ಧೈರ್ಯವಿದ್ದರೆ, ತಮ್ಮ ಭಾಷಣವನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡು ಸಮರ್ಥಿಸಿಕೊಳ್ಳಬೇಕು ಎಂದರು. ಸೋಮವಾರ ತೆಕ್ಕಾರುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕರು ಭಾರತೀಯ ಪ್ರಜೆಗಳನ್ನು ಕೀಳಾಗಿ ನಿಂದಿಸಿ, ದೇಶದ ಜನರನ್ನು ಅವಮಾನಿಸಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಶಾಸಕತ್ವದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದರು.

ಸಾಮಾಜಿಕ ಚಿಂತಕ ಹಾಗೂ ಕಾಂಗ್ರೆಸ್‌ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹೆಚ್ಚಿನ ಕಾರ್ಯಕರ್ತರಿಗೆ ಹಿಂದೂ ಧರ್ಮದ ನಿಜವಾದ ಅರ್ಥವೇ ತಿಳಿದಿಲ್ಲ. ಮೊದಲು ಅವರಿಗೆ ಹಿಂದೂ ಧರ್ಮದ ಕುರಿತು ತಿಳಿವಳಿಕೆ ನೀಡಬೇಕು. ಇಲ್ಲವಾದರೆ, ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏನು ಮಾತನಾಡಬೇಕೆಂಬ ಕನಿಷ್ಠ ಜ್ಞಾನವಿಲ್ಲದೆ, ತಮ್ಮನ್ನು ತಾವೇ ಹೊಗಳಿಕೊಂಡು ಹಿಂದೂ ಧರ್ಮದ ಮಾನ-ಮರ್ಯಾದೆಗೆ ಧಕ್ಕೆ ತರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಸಭೆಗಳಲ್ಲಿ ಇಂತಹ ರಾಜಕೀಯ ದ್ವೇಷದ ಭಾಷಣಗಳನ್ನು ಮಾಡುವವರ ವಿರುದ್ಧ ಧ್ವನಿಯೆತ್ತಿ ಖಂಡಿಸಬೇಕು. ಆಗ ಮಾತ್ರ ಹಿಂದೂ ಧರ್ಮವನ್ನು ರಕ್ಷಿಸಲು ಸಾಧ್ಯ ಎಂದು ಅವರು ಹೇಳಿದರು.

ಸಭೆಯಲ್ಲಿ ಸಮಾನಮನಸ್ಕ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ಗೌಡ, ಸಮದ್‌ ತೆಕ್ಕಾರು, ಸದಾಶಿವ ಶೆಟ್ಟಿ, ಜನಾರ್ಧನ ಆಚಾರ್ಯ, ಫಾರೂಕ್‌, ರಿಯಾಜ್‌, ಅಭಿಷೇಕ್‌, ಕಿರಣಪ್ರಭಾ, ಜಯಶ್ರೀ, ಪುಷ್ಪಾ, ಅಶ್ವಿತ, ರಾಮಚಂದ್ರ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ಶ್ಯಾಮರಾಜ್‌ ಪಟ್ರಮೆ ವಂದನೆ ಸಲ್ಲಿಸಿದರು.

Comments

Leave a Reply

Your email address will not be published. Required fields are marked *