ಬೈಂದೂರು, ಮೇ 27, 2025: ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಮುರ್ಗೋಳಹಕ್ಲು ಎಂಬಲ್ಲಿ ನಾಗರಾಜ ಎಂಬವರಿಗೆ ಸಂಬಂಧಿಸಿದ ಕಟ್ಟಡದಲ್ಲಿ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ದಾಸ್ತಾನು ಇರಿಸಲಾಗಿದೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿ, 11 ಕ್ವಿಂಟಾಲ್ ಅಕ್ಕಿಯನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.
ಪಿರ್ಯಾದಿದಾರರಾದ ವಿನಯಕುಮಾರ್, ಅಹಾರ ನಿರೀಕ್ಷಕರು, ಬೈಂದೂರು ತಾಲೂಕು, ಮಾಹಿತಿಯ ಆಧಾರದ ಮೇಲೆ ಗ್ರಾಮ ಆಡಳಿತ ಅಧಿಕಾರಿ ಪ್ರಿಯಾಂಕ ಅವರೊಂದಿಗೆ ಪಂಚರ ಸಮಕ್ಷಮದಲ್ಲಿ ದಿನಾಂಕ 25/05/2025 ರಂದು ಬೆಳಿಗ್ಗೆ 11:35 ಗಂಟೆಗೆ ದಾಳಿ ನಡೆಸಿದ್ದಾರೆ. ಆರೋಪಿಯಾದ ಮಜೀದ್, ಉಚಿತ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನುಬಾಹಿರವಾಗಿ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ನಾಗರಾಜ ಅವರ ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ. ಒಟ್ಟು 11 ಕ್ವಿಂಟಾಲ್ ತೂಕದ, 37,400 ರೂಪಾಯಿ ಮೌಲ್ಯದ 22 ಅಕ್ಕಿ ತುಂಬಿದ ಚೀಲಗಳನ್ನು ಅಧಿಕಾರಿಗಳು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2025 ರ ಅಡಿಯಲ್ಲಿ ಕಲಂ 3, 6, 7 Essential Commodities Act ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Leave a Reply