ಕುಂದಾಪುರ, ಮೇ 28, 2025: ಅವಿಭಜಿತ ದ,ಕ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಪ್ರಾಮಾಣಿಕ ಸೇವೆ ನೀಡುತ್ತಾ ವ್ಯವಸಾಯಗಾರರ ಶ್ರೇಯೋಭಿವೃದ್ಧಿಯಲ್ಲಿ ಶ್ರಮಿಸುತ್ತಿವೆ. ಕೃಷಿಪತ್ತಿನ ಸಹಕಾರ ಸಂಘಗಳಿಗೆ ರೈತರಿಗೆ ಪೂರಕವಾಗಿ ಸ್ಪಂದಿಸಲು ಸಾಕಷ್ಟು ಅವಕಾಶಗಳಿದ್ದು, ಆ ಬಗ್ಗೆಯೂ ಚಿಂತನೆಯನ್ನು ಮಾಡಬೇಕಾಗಿದೆ ಎಂದು ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಮೇ 28ರಂದು ಹಾಲಾಡಿಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಶುದ್ಧ ತೆಂಗಿನ ಎಣ್ಣೆ ತಯಾರಿಸುವ ಘಟಕಗಳನ್ನು ನಿರ್ಮಿಸಿ ಸೇವೆ ನೀಡಲು ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಅವಕಾಶವಿದೆ. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದವರು ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ಈ ಯೋಜನೆಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಅದೇ ರೀತಿ ಕರಾವಳಿಯಲ್ಲಿ ಭತ್ತದ ಧಾರಣೆಯನ್ನು ಕೂಡಾ ಅಕ್ಕಿಗಿರಣಿಯವರು ನಿರ್ಧರಿಸುತ್ತಾರೆ. ಕಟಾವು ಆದ ತಕ್ಷಣ ಭತ್ತ ಗಿರಣಿಗಳಿಗೆ ಹೋಗುತ್ತದೆ. ಅಲ್ಲಿ ತೇವಾಂಶ, ಇತರ ಕಾರಣ ಹೇಳಿ ಅವರು ನೀಡಿದ ಬೆಲೆಯನ್ನು ರೈತರು ಪಡೆದುಕೊಳ್ಳಬೇಕು. ರೈತರಿಗೆ ಸೂಕ್ತ ಗೋದಾಮು, ಒಣಿಸಲು ಡ್ರೈಯರ್ ವ್ಯವಸ್ಥೆ ಇದ್ದರೆ ಭತ್ತವನ್ನು ಉತ್ತಮ ಧಾರಣೆ ಬರುವ ತನಕ ಶೇಖರಿಸಿಡಬಹುದು. ಅಂಥಹ ವ್ಯವಸ್ಥೆಯನ್ನು ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮಾಡಬೇಕು. ವ್ಯವಸಾಯ ಸೇವಾ ಸಹಕಾರಿ ಸಂಘಗಳು ರೂಪಿತವಾಗಿದ್ದೇ ವ್ಯವಸಾಯಗಾರರ ಅನುಕೂಲಕ್ಕಾಗಿ. ತನ್ನ ಜವಬ್ದಾರಿಯನ್ನು ಯಾವತ್ತೂ ಮರೆಯಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್.ಜಯರಾಮ ಶೆಟ್ಟಿ ಮಾತನಾಡಿ, ಹಾಲಾಡಿ ಶಾಖೆ ಇವತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಮರುಪಾವತಿ, ಠೇವಣಿ, ಸದಸ್ಯತ್ವ ಎಲ್ಲ ವಿಚಾರಗಳಲ್ಲೂ ಗುರುತಿಸಿಕೊಂಡಿದೆ. ಗ್ರಾಹಕರ ವಿಶ್ವಾಸದ ಕಾರಣ ಇವತ್ತು ಇಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಕಟ್ಟಡ ಆರಂಭವಾಗಲು ಕಾರಣವಾಯಿತು. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಸ್ತುತ 4.21 ಕೋಟಿ ಪಾಲು ಬಂಡವಾಳ, 104.20 ಕೋಟಿ ಠೇವಣಾತಿ, 50.07 ಕೋಟಿ ಹೂಡಿಕೆಯನ್ನು ಹೊಂದಿದೆ. ಮಾರ್ಚ್ 31-2025ರ ಅಂತ್ಯಕ್ಕೆ 2.40 ಕೋಟಿ ಲಾಭ ಗಳಿಸಿದೆ. ನಾಲ್ಕು ಶಾಖೆಗಳನ್ನು ಸಂಸ್ಥೆ ಹೊಂದಿದ್ದು ಎಲ್ಲ ಶಾಖೆಗಳು ಸ್ವಂತ ಕಟ್ಟಡ ಹೊಂದಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. 828 ಕೋಟಿ ವ್ಯವಹಾರವನ್ನು ಸಂಸ್ಥೆ ಮಾಡಿದೆ. ಸಂಘದ ವತಿಯಿಂದ ಗೋಳಿಯಂಗಡಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಗ್ರಾಹಕರಿಗೆ ಲಾಕರ್ ಕೀ ಹಸ್ತಾಂತರ ಮಾಡಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು, ಸಹಕಾರಿ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಕೃಷಿಪತ್ತಿನ ಸಹಕಾರ ಸಂಘಗಳು ಇವತ್ತು ರೈತರಿಗೆ ಪ್ರಾಮಾಣಿಕ ಸೇವೆ ನೀಡುತ್ತಾ, ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿವೆ. ರೈತರಿಗೆ ಯಂತ್ರೋಪಕರಣಗಳು, ಔಷಧ, ಶಿಕ್ಷಣಕ್ಕೆ ನೆರವು, ಸಾಮಾಜಿಕ ಉದ್ದೇಶಗಳಿಗೆ ಉತ್ತೇಜನ ನೀಡುವಲ್ಲಿ ಸಹಕಾರ ಕ್ಷೇತ್ರ ತೊಡಗಿಸಿಕೊಂಡಿದೆ. ಗಳಿಸಿದ ಲಾಭದಲ್ಲಿ ಸದಸ್ಯರಿಗೆ, ಸಮಾಜಕ್ಕೆ ನೀಡುವುದು ಕೂಡಾ ಮುಖ್ಯ. ಇವತ್ತು ಹಾಲಾಡಿಯಲ್ಲಿ ಅಂದು ಮಹಾಬಲ ಶೆಟ್ಟಿಯವರು ಸಹಕಾರದ ಉದ್ದೇಶಕ್ಕೆ ನಿವೇಶನ ಕಾದಿರಿಸಿದ್ದನ್ನು ಇಂದೂ ಜನ ನೆನಪಿಸಿಕೊಳ್ಳುತ್ತಾರೆ. ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಬೇಕು ಎಂದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಮ್.ಮಹೇಶ ಹೆಗ್ಡೆ ಹೊಸ ನವೋದಯ ಸ್ವ-ಸಹಾಯ ಸಂಘಗಳನ್ನು ಉದ್ಘಾಟಿಸಿದರು. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯ, ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಚೋರಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಸುಬ್ರಾಯ, ಸಯ್ಯಾದ್ ಸಾಹೇಬ್ ಹೆಚ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡದ ಒಳಾಂಗಣ ವಿನ್ಯಾಸ ಮಾಡಿದ ಸೂರ್ಯಪ್ರಕಾಶ ಭಟ್, ಸಹಕಾರ ನೀಡಿದ ನರಸಿಂಹ ಶೆಟ್ಟಿ ಚೋರಾಡಿ, ಅಣ್ಣಪ್ಪ ಕುಲಾಲ್ ಅವರಿಗೆ ಗೌರವಾರ್ಪಣೆ ನೀಡಲಾಯಿತು.
ಹಾಲಾಡಿ ಶಾಖೆ ಶಾಖಾ ವ್ಯವಸ್ಥಾಪಕ ಚಂದ್ರಶೇಖರ ಪೂಜಾರಿ, ನಿರ್ದೇಶಕರಾದ ಎಚ್.ಕೆ.ಸೀತಾರಾಮ ಶೆಟ್ಟಿ, ದಯಾನಂದ ಆರ್.ಶೆಟ್ಟಿ, ಎಮ್.ಚಂದ್ರಶೇಖರ ಶೆಟ್ಟಿ, ದಯಾನಂದ ಪೂಜಾರಿ ಕೆ., ಇಚ್ಚಿತಾರ್ಥ ಶೆಟ್ಟಿ, ಉದಯ ಶೆಟ್ಟಿ, ಕೃಷ್ಣ ನಾಯ್ಕ, ಶ್ರೀಮತಿ ಸವಿತಾ ಪಿ ಶೆಟ್ಟಿ, ಶ್ರೀಮತಿ ಸುಜಾತ ಪೂಜಾರಿ, ಶಿವರಾಮ, ಪ್ರದೀಪ, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಘದ ಬೆಳವಣಿಗೆಯ ವಿವರ ನೀಡುತ್ತಾ, 7 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವು 12 ಸಾವಿರ ಸದಸ್ಯರನ್ನು ಹೊಂದಿದೆ. 99% ಸಾಲ ವಸೂಲಾತಿ, 100 ಸ್ವಸಹಾಯ ಸಂಘಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಭಾಗದ ಬಹುದಿನಗಳ ಬೇಡಿಕೆಯಾದ ಹೊಸ ಕಟ್ಟಡವು ಸುಮಾರು 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಸದಸ್ಯರ ಸೇವೆ ಸಜ್ಜಾಗಿದೆ ಎಂದರು.
ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ಹರೀಶ್ ಕಿಣಿ ಬಿ. ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.
Leave a Reply