ಉಡುಪಿ, ಮೇ 28, 2025: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋಡಿಕಲ್ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಮಗುಚಿ ಬಿದ್ದ ಘಟನೆಯಲ್ಲಿ ಫೋಟೋಗ್ರಾಫರ್ ಸೂರ್ಯ ನಾರಾಯಣ (48) ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಸೂರ್ಯ ನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೋಗ್ರಾಫಿಗಾಗಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೋಡಿಕಲ್ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಸೂರ್ಯ ನಾರಾಯಣ ಅವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಸ್ವಂತ ಫೋಟೋಗ್ರಾಫಿ ಸ್ಟೂಡಿಯೋ ಆರಂಭಿಸಿದ್ದರು. ಉಡುಪಿಯಲ್ಲಿ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ಅವರನ್ನು ‘ವರ್ ಸೂರ್ಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.
Leave a Reply