ಹೆಬ್ರಿ, ಮೇ 28: ಕಳ್ತೂರು ಗ್ರಾಮದ ಚಂದ್ರಶೇಖರ (56) ಎಂಬುವವರ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ದಿನಾಂಕ 27/05/2025 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಚಂದ್ರಶೇಖರ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಹೋಟೆಲ್ ಉದ್ಯಮಿಯಾಗಿದ್ದು, ಇವರ ಪತ್ನಿ ಮತ್ತು ಮಕ್ಕಳು ಕಳ್ತೂರಿನಲ್ಲಿ ವಾಸವಾಗಿದ್ದಾರೆ.
ದಿನಾಂಕ 08/05/2025 ರಂದು ಚಂದ್ರಶೇಖರ ಅವರ ಪತ್ನಿ ಮತ್ತು ಮಗಳು ಮನೆಗೆ ಬೀಗ ಹಾಕಿ ಕಿತ್ತೂರಿಗೆ ತೆರಳಿದ್ದರು. ದಿನಾಂಕ 25/05/2025 ರಂದು ಚಂದ್ರಶೇಖರ ಅವರ ಮಗ ಮತ್ತು ಮಾವ ಕಳ್ತೂರಿನ ಮನೆಗೆ ಭೇಟಿ ನೀಡಿ ಮನೆಯನ್ನು ಸ್ವಚ್ಛಗೊಳಿಸಿ ವಾಪಸಾಗಿದ್ದರು. ಆದರೆ, ದಿನಾಂಕ 27/05/2025 ರಂದು ಬೆಳಿಗ್ಗೆ 4:00 ಗಂಟೆಗೆ ಚಂದ್ರಶೇಖರ ಅವರು ಕುಟುಂಬದೊಂದಿಗೆ ಮನೆಗೆ ವಾಪಸಾದಾಗ, ಕಳ್ಳರು ಅಡುಗೆಮನೆಯ ಗೋಡೆಯ ವೆಂಟಿಲೇಟರ್‌ಗೆ ಒಡದಲು ಇಟ್ಟಿದ್ದ ಮರದ ಹಲಗೆಯ ಮೂಲಕ ಮನೆಯೊಳಗೆ ಪ್ರವೇಶಿಸಿರುವುದು ಕಂಡುಬಂದಿದೆ.
ಕಳ್ಳರು ಮಲಗುವ ಕೋಣೆಯ ಮರದ ಕಪಾಟಿನ ಡ್ರಾಯರ್ ಒಡೆದು, 60,000 ರೂ. ಮೌಲ್ಯದ ಚಿನ್ನದ ಬಳೆಗಳು (2), ಉಂಗುರ (1), ಚಿನ್ನದ ಪಾಟಿ (2), 20,000 ರೂ. ನಗದು, 5,000 ರೂ. ಮೌಲ್ಯದ ವಾಚ್, 4,000 ರೂ. ಮೌಲ್ಯದ ಬೆಳ್ಳಿಯ ಕಾಲು ಚೈನ್ ಮತ್ತು ನೇವಲ, ಹಾಗೂ ದೇವರ ಕೋಣೆಯಿಂದ 32,000 ರೂ. ಮೌಲ್ಯದ ಬೆಳ್ಳಿಯ ಚೊಂಬು (1), ದೊಡ್ಡ ಬೆಳ್ಳಿಯ ದೀಪ (2), ಮತ್ತು ಸಣ್ಣ ಬೆಳ್ಳಿಯ ದೀಪಗಳು (3) ಕಳವುಗೊಳಿಸಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಚಂದ್ರಶೇಖರ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪರಾಧ ಕ್ರಮಾಂಕ 31/2025 ರ ಅಡಿಯಲ್ಲಿ ಕಲಂ 305, 331(3), 331(4) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Leave a Reply