ಕುಂದಾಪುರ, 28 ಮೇ,2025: ರಸ್ತೆಯಲ್ಲಿ ಹಾದು ಹೋಗುವಾಗ ನೀವೊಮ್ಮೆ ಸುಮ್ಮನೆ ತಲೆ ಎತ್ತಿ ನೋಡಬೇಕು. ಕಂಬದಿಂದ ಕಂಬಕ್ಕೆ ತೋರಣ ಕಟ್ಟಿದಂತೆ ಕೇಬಲ್ ವೈರ್ ಗಳು ಇನ್ನೇನು ಬಿದ್ದೇ ಬಿಡುವುದೋ ಎನ್ನುವಂತೆ ಜೋತಾಡುತ್ತಿರುವ ನೋಟ ಭಯ ಹುಟ್ಟಿಸುತ್ತದೆ. ಕುಂದಾಪುರದಿಂದ ಅಮಾವಾಸೆಯವರೆಗೂ ತಲೆಮೇಲೆ ಜೋತುಬಿದ್ದಂತೆಯೇ ಇವೆ. ಅಪಾಯವನ್ನು ತಂದೊಡ್ಡುತ್ತಿವೆ. ಮೆಸ್ಕಾಂ ಅನುಮತಿಯಿಲ್ಲದೇ ಅನಧಿಕೃತ ಕಂಬಗಳನ್ನು ಅಳವಡಿಸಿ ಪ್ರೈವೇಟ್ ಕಂಪೆನಿಗಳನ್ನು ಕೇಬಲ್ ವೈರ್ ಗಳನ್ನು ಎಳೆಯುತ್ತಿವೆ. ನೂರಾರು ಕಿ. ಮೀ. ಉದ್ದದ ಅನಧಿಕೃತ ಕೇಬಲ್ ಜಾಲ ಹರಡಿಕೊಂಡಿದೆ. ಮಾನದಂಡಗಳನ್ನು ಮೀರಿ ಅವೈಜ್ಞಾನಿಕವಾಗಿ ಕೇಬಲ್ ವೈರ್ ಗಳನ್ನು ಎಳೆಯಲಾಗುತ್ತಿದೆ. ಮೆಸ್ಕಾಂ ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಮುಂದಿನ ಸಭೆಯಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಕುಂದಾಪುರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಮುಂದಿನ ಸಭೆಯಲ್ಲಿ ಕೇಬಲ್ ಕಂಪೆನಿಗಳಿಂದ ಎಷ್ಟು ಹಣ ಪಾವತಿ ಮಾಡಿಕೊಳ್ಳಲಾಗುತ್ತಿದೆ, ಎಷ್ಟು ಕಂಬಗಳಿಗೆ ಮೆಸ್ಕಾಂ ನಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎನ್ನುವುದರ ಬಗ್ಗೆ ಅನುಪಾಲನ ವರದಿ ಸಲ್ಲಿಸುವಂತೆ ಅವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು(ಬುಧವಾರ) ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಚಂದ್ರ ಕಾಂಚನ್, ವಿದ್ಯುತ್ ತಂತಿಗಳು, ಕೇಬಲ್ ವೈರ್ ಗಳ ಅವೈಜ್ಞಾನಿಕ ಅಳವಡಿಕೆಯ ಬಗ್ಗೆ ಸಭೆಯ ಗಮನ ಸೆಳೆದರು. ಅವೈಜ್ಞಾನಿಕ ಕೇಬಲ್ ವೈರ್ ಗಳ ಅಳವಡಿಕೆಗೆ ಮೆಸ್ಕಾಂ ಇಲಾಖೆ ಅನುಮತಿ ನೀಡಬಾರದು. ಕೇಬಲ್ ಅಳವಡಿಕೆಗೆಗೆ ಇಲಾಖೆಯಿಂದ ಕೇಳಿದ ಕೂಡಲೇ ಹೆಚ್ಚಿನ ನಿರ್ಬಂಧವಿಲ್ಲದೆ ಅನುಮತಿ ದೊರಕುವುದು ವಾಡಿಕೆ ಎಂಬಂತಾಗಿದೆ. ಸ್ಥಳ ಪರಿಶೀಲನೆ ಮಾಡಿ ಅನುಮತಿ ನೀಡಬೇಕು. ಆಗ ಮಾತ್ರ ಅಪಾಯ ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಮೆಸ್ಕಾಂ ಬಗ್ಗೆ ಅಧ್ಯಕ್ಷರ ಅಸಮಧಾನ :
ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಹಾಗೂ ಕಂಬಗಳ ಮೇಲೆ ಅಕ್ಕಪಕ್ಕದ ಮರಗಳ ಕೊಂಬೆಗಳು ಮಳೆ, ಗಾಳಿಯಿಂದ ಬಿದ್ದು ವಿದ್ಯುತ್ ಕಂಬ, ತಂತಿಗಳಿಗೂ ಹಾನಿ ಉಂಟಾಗುತ್ತದೆ ಎನ್ನುವುದರ ಬಗ್ಗೆ ಮೆಸ್ಕಾಂ ಸಿಬ್ಬಂದಿಗಳಿಗೆ, ಇಲಾಖೆಗೆ ಹೇಳಬೇಕೆಂದಿಲ್ಲ. ಮಳೆಗಾಲ ಆರಂಭಕ್ಕೂ ಮುಂಚೆಯೇ ವಿದ್ಯುತ್ ತಂತಿ, ಕಂಬಗಳ ಅಕ್ಕಪ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಿ ಮುಂಜಾಗ್ರತೆ ವಹಿಸದೆ ಇರುವುದು ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ.
ಅಪಾಯವನ್ನು ತಡೆಯುವ ಉದ್ದೇಶದಿಂದ ಕಂಬಗಳು, ತಂತಿಗಳ ಮೇಲೆ ಚಾಚಿಕೊಂಡಿರುವ ಮರದ ಕೊಂಬೆಗಳನ್ನು ಮೆಸ್ಕಾಂ ಇಲಾಖೆ ಕಡಿದು ಅಪಾಯವನ್ನು ತಪ್ಪಿಸಬಹುದಿತ್ತು. ಇನ್ನಾದರೂ ಮುಂಜಾಗ್ರತೆ ವಹಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು. ಖಾಸಗಿ ಜಾಗದಲ್ಲಿರುವ ತಂತಿಗಳ ಮೇಲೆ ಬಂದ ಕೊಂಬೆಗಳನ್ನು ತೆಗೆಯುವುದಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂತು. ಇಲಾಖೆ ಮುತುವರ್ಜಿ ವಹಿಸಿಕೊಂಡು ಅವಘಡವನ್ನು ತಪ್ಪಿಸುವಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಲೈನ್ ಮ್ಯಾನ್ ಕೊರತೆ :
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಜಹೀರ್ ನಾಖುದ ಗಂಗೊಳ್ಳಿ, ಮಳೆಯಿಂದಾಗಿ ವಿದ್ಯುತ್ ವ್ಯತ್ಯವಾಗುತ್ತಿರುವುದನ್ನು ಮತ್ತು ಗಂಗೊಳ್ಳಿ ಭಾಗದಲ್ಲಿ ಲೈನ್ ಮ್ಯಾನ್ ಗಳ ಕೊರತೆಯ ಬಗ್ಗೆ ಸಭೆಯ ಗಮನ ಸೆಳೆದರು. ಹೆಚ್ಚವರಿ ಲೈನ್ ಮ್ಯಾನ್ ಗಳನ್ನು ನಿಯೋಜಿಸುವಂತೆ ಅವರು ಒತ್ತಾಯಿಸಿದರು. ಮೆಸ್ಕಾಂ ತಲ್ಲೂರು ಉಪ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಶಿವಾನಂದ್ ನಾಯಕ್ ಮಾತನಾಡಿ, ಉಡುಪಿ ಜಿಲ್ಲಾಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ತಲ್ಲೂರು ಉಪವಿಭಾಗಕ್ಕೆ ಲೈನ್ ಮ್ಯಾನ್ ನೇಮಕಗೊಳ್ಳಬಹುದು ಎಂದು ಅವರು ಹೇಳಿದರು.
ರೇಷನ್ ಕಾರ್ಡ್ ತಿದ್ದುಪಡಿಗೆ ಸಹಕರಿಸಿ :
ಕೊರಗ ಕುಟುಂಬಗಳು ಪಡಿತರ ಚೀಟಿಯಲ್ಲಿ ದೋಷದಿಂದ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯದಂತಾಗಿದೆ. ಪಡಿತರ ಚೀಟಿ ತಿದ್ದುಪಡಿ ಕಾರ್ಯವನ್ನು ಆಹಾರ ಇಲಾಖೆ ಸ್ವಯಂ ಮುತುವರ್ಜಿ ವಹಿಸಿ ನಿರ್ವಹಿಸಬೇಕೆಂದು ಅಧ್ಯಕ್ಷರು ತಿಳಿಸಿದರು.
ತಾಲೂಕಿಗೆ ಏಪ್ರಿಲ್ ನಲ್ಲಿ 9,72,72,172 ರೂ.
ಕುಂದಾಪುರ ತಾಲೂಕಿಗೆ ಈವರೆಗೆ ಗ್ರಹಲಕ್ಷ್ಮೀ ಯೋಜನೆಯಿಂದ 176,92,96,000 ರೂ. ಗ್ರಹಜ್ಯೋತಿ ಯೋಜನೆಯಿಂದ ಏಪ್ರಿಲ್ ತಿಂಗಳಲ್ಲಿ ತಾಲೂಕಿಗೆ 3,93,14,282 ರೂ. ಅನ್ನ ಭಾಗ್ಯ ಯೋಜನೆಯಿಂದ 3,05,10,000 ರೂ. ಶಕ್ತಿ ಯೋಜನೆಗಾಗಿ 2,74,47,870 ರೂ. ಯುವನಿಧಿ ಯೋಜನೆಗಾಗಿ ಈವರೆಗೆ 1,18,00500 ರೂ. ಬಂದಿದೆ. ಒಟ್ಟು ಏಪ್ರಿಲ್ ತಿಂಗಳಲ್ಲಿ 9,72,72,172 ರೂ. ತಾಲೂಕಿಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತತ್ ಕಾರ್ಯ ನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್, ಅಉಣ್, ವಾಣಿ ಆರ್ ಶೆಟ್ಟಿ, ಸವಿತಾ ಪೂಜಾರಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
Leave a Reply