ಬೈಂದೂರು: ಪಟ್ಟಣ ಪಂಚಾಯತ್ ಎದುರು ಪೌರ ನೌಕರರ ಧರಣಿ

ಬೈಂದೂರು, ಮೇ 29, 2025: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಆದೇಶದಂತೆ, ರಾಜ್ಯಾದ್ಯಂತ ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕೇಂದ್ರ ಕಚೇರಿ ಚಿತ್ರದುರ್ಗ ಮತ್ತು ಬೆಂಗಳೂರು ವತಿಯಿಂದ ಮೇ 27ರಿಂದ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಬೈಂದೂರು ಪಟ್ಟಣ ಪಂಚಾಯತ್‌ನ ಪೌರ ಸೇವಾ ನೌಕರರು ಭಾಗವಹಿಸಿದ್ದಾರೆ.

ಬುಧವಾರ, ಪೌರ ನೌಕರರು ಸೇವೆಯನ್ನು ಸ್ಥಗಿತಗೊಳಿಸಿ, ಬೈಂದೂರು ಪಟ್ಟಣ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಇದರ ಪರಿಣಾಮವಾಗಿ, ಕಚೇರಿಯ ಯಾವುದೇ ಕೆಲಸಕಾರ್ಯಗಳು ನಡೆಯಲಿಲ್ಲ. ವಿಶೇಷವಾಗಿ, ನಗರ ಸ್ವಚ್ಛತೆ ಕಾರ್ಯಕ್ಕೆ ತೀವ್ರ ಅಡಚಣೆಯಾಯಿತು. ಪ್ರತಿಭಟನೆ ಮುಂದುವರಿದರೆ ನೀರಿನ ಸಮಸ್ಯೆಯೂ ಉದ್ಭವಿಸಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪೌರ ನೌಕರರ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಬೇಕೆಂದು ಒತ್ತಾಯಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಮತ್ತು ಬೇಡಿಕೆಗಳ ಈಡೇರಿಕೆಗೆ ಶಿಫಾರಸು ಮಾಡಲು ಪ್ರತಿಭಟನಾಕಾರರು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತ್ ಕಂದಾಯ ನಿರೀಕ್ಷಕ ನಂದಯ್ಯ ಪೂಜಾರಿ ಅವರು ಪೌರಕಾರ್ಮಿಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

Comments

Leave a Reply

Your email address will not be published. Required fields are marked *