ಕೋಟದಲ್ಲಿ ಭೀಕರ ರಸ್ತೆ ಅಪಘಾತ: ತಂದೆ ಮತ್ತು ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ಕೋಟ, ಮೇ 30, 2025: ಉಡುಪಿ ಜಿಲ್ಲೆಯ ಕೋಟದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಾಳ್ಕುದ್ರು ಗ್ರಾಮದ ಮಾಬುಕಳ ಸೇತುವೆಯ ಮೇಲೆ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಮೇ 27, 2025ರಂದು ಬೆಳಗ್ಗೆ 10:30ರ ಸುಮಾರಿಗೆ ನಡೆದಿದೆ.

ಆರೂರು ಗ್ರಾಮದ ನಿವಾಸಿ ಚಂದ್ರಕಾಂತ (46) ಎಂಬವರು ತಮ್ಮ ಕೆಲಸದಿಂದ ರಜೆ ಪಡೆದು ಚಿಕಿತ್ಸೆಗಾಗಿ ತಮ್ಮ ಮಕ್ಕಳಾದ ವಿಹಾನ್ (11) ಮತ್ತು ಲಿಹಾನ್ (6) ರವರೊಂದಿಗೆ ಜುಪಿಟರ್ ಸ್ಕೂಟಿ (KA-20-EQ-1961)ಯಲ್ಲಿ ಬ್ರಹ್ಮಾವರದಿಂದ ಸಾಲಿಗ್ರಾಮ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕಾರೊಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಚಂದ್ರಕಾಂತ ಮತ್ತು ಅವರ ಮಕ್ಕಳು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಚಂದ್ರಕಾಂತ ಅವರಿಗೆ ಎಡಗೈಯಲ್ಲಿ ಮಾಂಸ ಹೊರಬಂದು ಮೂಳೆ ಮುರಿತವಾಗಿದ್ದು, ಹೊಟ್ಟೆ ಮತ್ತು ಎದೆಗೆ ಒಳಗಾಯಗಳಾಗಿವೆ. ಮಗು ವಿಹಾನ್‌ಗೆ ತೊಡೆ, ಕಾಲು ಮತ್ತು ಕೈಗೆ ಗಾಯಗಳಾಗಿದ್ದು, ಲಿಹಾನ್‌ಗೆ ಹೊಟ್ಟೆಗೆ ತೀವ್ರ ಗಾಯವಾಗಿದೆ. ಅಪಘಾತದ ಸ್ಥಳದಲ್ಲಿ ಸೇರಿದ್ದ ಸ್ಥಳೀಯ ಜನರು ಮತ್ತು ಚಂದ್ರಕಾಂತ ಅವರ ಪರಿಚಯದ ವೆಡಿಯಪ್ಪ ಎಂಬವರು ಗಾಯಾಳುಗಳನ್ನು ತಕ್ಷಣ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪ್ರಸ್ತುತ, ಚಂದ್ರಕಾಂತ ಅವರು ತೀವ್ರ ಗಾಯಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಳಿಕೆ ನೀಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ಮತ್ತು ಪರಿಚಯದ ವೆಡಿಯಪ್ಪ ಎಂಬವರು ಕೆಲಸದ ನಿಮಿತ್ತ ತೆರಳಿರುವುದರಿಂದ ದೂರು ದಾಖಲಿಸಲು ವಿಳಂಬವಾಗಿದೆ. ಈ ಘಟನೆಯ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2025ರ ಅಡಿಯಲ್ಲಿ ಕಲಂ 281, 125(a), 125(b) BNS ರಂತೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *