ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬೇಕರಿಯೊಂದರಲ್ಲಿ ಆಸ್ತಿ ವಿವಾದದಿಂದ ಉಂಟಾದ ಕೊಲೆ ಘಟನೆಯಲ್ಲಿ ಚೆನ್ನಪ್ಪ ನಾರಿನಾಳ (35) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಈ ಘಟನೆ ದಿನಾಂಕ 31/05/2025ರ ಶನಿವಾರ ಮಧ್ಯರಾತ್ರಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಚೆನ್ನಪ್ಪ ನಾರಿನಾಳ ಮತ್ತು ರವಿ ನಾರಿನಾಳ ಕುಟುಂಬಗಳ ನಡುವೆ ದೀರ್ಘಕಾಲದಿಂದ ಆಸ್ತಿಗೆ ಸಂಬಂಧಿಸಿದ ವೈಮನಸ್ಸು ಇತ್ತು. ಈ ವಿವಾದವು ಶನಿವಾರ ರಾತ್ರಿ ಜಗಳಕ್ಕೆ ಕಾರಣವಾಗಿದ್ದು, ರವಿ ನಾರಿನಾಳ ಮತ್ತು ಆತನ ಸಹಚರರು ಚೆನ್ನಪ್ಪನವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯು ಬೇಕರಿಯೊಳಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಮಾಹಿತಿ ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ವಶಕ್ಕೆ ಪಡೆಯಲು ತನಿಖಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಘಟನೆಗೆ ಸಂಬಂಧಿಸಿದಂತೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
Leave a Reply