ಗಂಗೊಳ್ಳಿ, ಜೂನ್ 03, 2025: ಕುಂದಾಪುರ ತಾಲೂಕಿನ ಆಲೂರು ಗ್ರಾಮದ ತಲ್ಲೂರು ನಿವಾಸಿ ಗಣೇಶ್ (42) ಎಂಬವರು ಕಳೆದ 20 ವರ್ಷಗಳಿಂದ ಆಲೂರು-ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ‘ಜಯದುರ್ಗಾ’ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 02/06/2025 ರಂದು ಸಂಜೆ ಕುಂದಾಪುರದಿಂದ ಆಲೂರಿಗೆ ಬಸ್ಸು ಪ್ರಯಾಣಿಸುತ್ತಿರುವಾಗ, ಆಲೂರು ಏಳು ಸುತ್ತಿನಕೋಟೆ ಬಳಿ ಆರೋಪಿ ಪ್ರದೀಪ್ ಎಂಬಾತ ಬಸ್ಸನ್ನು ಹತ್ತಿ ಗಣೇಶ್ ಅವರೊಂದಿಗೆ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಗಣೇಶ್ ವಿಷಯವನ್ನು ಕೇಳುತ್ತಿರುವಾಗ, ಬಸ್ಸು ಸಂಜೆ 6:20 ಗಂಟೆಗೆ ಆಲೂರು ಗ್ರಾಮದ ಹೊಯಿಗೆಹರ ಬಸ್ ನಿಲ್ದಾಣಕ್ಕೆ ತಲುಪಿತು.
ಈ ವೇಳೆ ಬಸ್ ನಿಲ್ದಾಣದ ಬಳಿ ಮೂರು ಬೈಕ್‌ಗಳಲ್ಲಿ ತಂದು ನಿಂತಿದ್ದ ಐವರು ವ್ಯಕ್ತಿಗಳು ಬಸ್ಸನ್ನು ಹತ್ತಿ, ಆರೋಪಿ ಪ್ರದೀಪ್‌ನೊಂದಿಗೆ ಸೇರಿಕೊಂಡು ಗಣೇಶ್ ಅವರ ಶರ್ಟ್ ಕಾಲರ್ ಹಿಡಿದು ಅವಾಚ್ಯವಾಗಿ ಬೈದಿದ್ದಾರೆ. ಎಲ್ಲರೂ ಸೇರಿ ಗಣೇಶ್ ಅವರಿಗೆ ಮುಷ್ಟಿಯಿಂದ ತುಟಿಗೆ ಗುದ್ದಿ ರಕ್ತಗಾಯವಾಗುವಂತೆ ಮಾಡಿದ್ದಾರೆ. ಜೊತೆಗೆ ಎದೆಗೆ ಕಾಲಿನಿಂದ ತುಳಿದು, ಕುತ್ತಿಗೆಗೆ ಬಲವಾಗಿ ಹೊಡೆದು, ಗಣೇಶ್ ಧರಿಸಿದ್ದ ಬನಿಯಾನ್ ಹರಿದು, ಅವರ ಕೈಯಲ್ಲಿದ್ದ ಬ್ಯಾಗ್‌ನಿಂದ 15,700 ರೂಪಾಯಿ ಹಣವನ್ನು ಕಸಿದುಕೊಂಡಿದ್ದಾರೆ. ಮುಂದಕ್ಕೆ ಗಣೇಶ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2025ರಡಿಯಲ್ಲಿ ಕಲಂ 189(2), 191(2), 115(2), 119(1), 352, 351(2) ಜೊತೆಗೆ 190 B.N.S. ಮತ್ತು ಕಲಂ 3(1)(r)(s), 3(2)(V), 3(2)(Va) SC/ST ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
Leave a Reply