ಹೆನ್ನಾಬೈಲ್, ಜೂನ್ 07, 2025: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಹೆನ್ನಾಬೈಲ್‌ನ ಜುಮಾ ಮಸೀದಿಯಲ್ಲಿ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು. ಈದುಲ್ ಆಝ್ಹಾ ಪ್ರಾರ್ಥನಾ ಸಭೆಯಲ್ಲಿ ಪ್ರವಾದಿ ಇಬ್ರಾಹಿಮರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧರ್ಮಗುರು, “ಪ್ರವಾದಿ ಇಬ್ರಾಹಿಮರು ದೇವನಿಷ್ಠೆ ಮತ್ತು ಶ್ರದ್ಧೆಯ ದೊಡ್ಡ ಸಂಕೇತವಾಗಿ ಲೋಕಕ್ಕೆ ಮೂಡಿಬಂದರು. ಅವರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವುದರಿಂದ ಮನುಷ್ಯನ ಮನಸ್ಸು ಸಂವೇದನಾಶೀಲವಾಗಿ, ಸಾಮಾಜಿಕ ಸಂಬಂಧಗಳು ಸುಗಮವಾಗಲು ಕಾರಣವಾಗುತ್ತದೆ. ಇಬ್ರಾಹಿಮರು ತಮ್ಮ ಜೀವಮಾನವಿಡೀ ಬಡವ-ಶ್ರೀಮಂತ, ಕರಿಯ-ಬಿಳಿಯ ಮುಂತಾದ ಸಾಮಾಜಿಕ ತಾರತಮ್ಯಗಳನ್ನು ತೊಡೆದುಹಾಕಲು ಶ್ರಮಿಸಿದರು. ಮನುಕುಲಕ್ಕೆ ಅವರು ನೀಡಿದ ಕೊಡುಗೆಯನ್ನು ಸೀಮಿತ ಅವಧಿಯಲ್ಲಿ ವಿವರಿಸಲಾಗದು,” ಎಂದರು.
ಪ್ರಾರ್ಥನಾ ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸೈಯದ್ ರಫೀಕ್, ಉಪಾಧ್ಯಕ್ಷ ಸೈಯದ್ ಆಸೀಫ್, ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ಮಾಜಿ ಅಧ್ಯಕ್ಷ ಸಯ್ಯದ್ ಅಬ್ಬಾಸ್, ಹಸನ್ ಸಾಹೇಬ್, ಅಲಿಯಬ್ಬ, ನಜಿರ್ ಸಾಹೇಬ್, ಹಯಾತ್ ಭಾಷಾ ಸಾಹೇಬ್, ಯೂಸುಫ್ ಖಾದರ್, ಶಬ್ಬೀರ್ ಸಾಹೇಬ್, ಅಮಾನ್ ಜಮಾಲ್, ಆದಮ್ ಸಾಹೇಬ್, ಅಷ್ಪಾಕ್ ಸಾಬ್ಜನ್, ಖಲೀಲ್ ತವಕ್ಕಲ್, ಮುಹಮ್ಮದ್ ರಫೀಕ್, ಖ್ವಾಜಾ ಸಾಹೇಬ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ, ಮಕ್ಕಳು ಮತ್ತು ಹಿರಿಯರು ಹೊಸ ಉಡುಪುಗಳನ್ನು ಧರಿಸಿ, ವಿಶೇಷ ನಮಾಜ್‌ನಲ್ಲಿ ಭಾಗವಹಿಸಿದರು. ಬಕ್ರೀದ್ ಹಬ್ಬವು ಸಾಮಾಜಿಕ ಸಾಮರಸ್ಯ, ತ್ಯಾಗ ಮತ್ತು ಸಮರ್ಪಣೆಯ ಮನೋಭಾವವನ್ನು ಎತ್ತಿಹಿಡಿಯುವ ಮಹತ್ವದ ಆಚರಣೆಯಾಗಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.
Leave a Reply