ಹೆಬ್ರಿ, ಜೂನ್ 11, 2025: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ವಾಸುದೇವ ಪುತ್ತಿ (65) ಎಂಬ ವೃದ್ಧರಿಗೆ ಹೂಡಿಕೆಯ ಆಮಿಷ ತೋರಿಸಿ 31,58,452 ರೂ. ಮೊತ್ತಕ್ಕೆ ಮೋಸ ಮಾಡಿರುವ ಆರೋಪದಡಿ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಸುದೇವ ಪುತ್ತಿ ಅವರು 1995 ರಿಂದ 2020 ರವರೆಗೆ ಬೆಂಗಳೂರಿನ ಜಿಗಣಿಯ ಎ.ಎಫ್.ಡಿ.ಸಿ ಕಂಪೆನಿಯಲ್ಲಿ ಮೆಟೀರಿಯಲ್ ಮ್ಯಾನೇಜರ್ ಆಗಿ ಕೆಲಸ ಮಾಡಿ 2020 ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ, ಬೆಂಗಳೂರಿನ ಮೈಲಾರಿ ಆಗ್ರೋ ಪ್ರೊಡಕ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಕೆ. ಎಂಬಾತನ ಪರಿಚಯದ ಮೇರೆಗೆ 14/09/2021 ರಿಂದ 28/01/2022 ರವರೆಗೆ 5.5 ಲಕ್ಷ ರೂ. ಹೂಡಿಕೆ ಮಾಡಿದ್ದರು. ಈ ಹೂಡಿಕೆಗೆ 2.5 ಲಕ್ಷ ರೂ. ಬಡ್ಡಿಯನ್ನು ಪಡೆದಿದ್ದರೂ, ಕಂಪೆನಿ ಮುಚ್ಚಿಹೋಗಿತ್ತು.
2024 ರ ಸೆಪ್ಟೆಂಬರ್‌ನಲ್ಲಿ ರೋಹಿತ್ ಮತ್ತೆ ವಾಸುದೇವ ಅವರನ್ನು ಸಂಪರ್ಕಿಸಿ, ಕಂಪೆನಿಯಿಂದ ಹೂಡಿಕೆದಾರರಿಗೆ ಹಣ ವಾಪಸ್ ನೀಡಲು ದೊಡ್ಡ ಮೊತ್ತದ ಹಣ ಸಿಕ್ಕಿದೆ ಎಂದು ಆಮಿಷ ತೋರಿಸಿದ್ದಾನೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಮತ್ತು ಇತರ ಖರ್ಚುಗಳಿಗೆ ಹಣ ಬೇಕೆಂದು ತಿಳಿಸಿ, ತನ್ನ ಚಾಲಕರಾದ ನಾಗರಾಜ ಮತ್ತು ಜಗದೀಶ, ಹಾಗೂ ತಮ್ಮನಾದ ಪ್ರದೀಪನ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಕೇಳಿದ್ದಾನೆ. ಈ ರೀತಿಯಾಗಿ 17/09/2024 ರಿಂದ 05/06/2025 ರವರೆಗೆ ಹಂತಹಂತವಾಗಿ ಫೋನ್‌ಪೇ, ಗೂಗಲ್ ಪೇ, ಮತ್ತು NEFT ಬ್ಯಾಂಕಿಂಗ್ ಮೂಲಕ 31,58,452 ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ, ಹಣ ವಾಪಸ್ ಕೇಳಿದಾಗ ರೋಹಿತ್ ಬೆದರಿಕೆ ಹಾಕಿ, ನಂತರ ಸಂಪರ್ಕಕ್ಕೆ ಸಿಗದೆ ಮೋಸ ಮಾಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ರೋಹಿತ್, ಪ್ರದೀಪ, ಲಕ್ಷ್ಮೀ, ನಾಗರಾಜ, ಮತ್ತು ಜಗದೀಶ ಎಂಬ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025 ರಡಿಯಲ್ಲಿ ಕಲಂ 316(2), 318(4), 351(2), 351(3), 190 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Leave a Reply