ಉಡುಪಿ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯದ ಅಕ್ಕಿ ವಶಕ್ಕೆ; ಆರೋಪಿಯ ಬಂಧನ

ಉಡುಪಿ, ಜೂ. 10: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇರಿಸಿದ ಆರೋಪದ ಮೇರೆಗೆ ಜೂನ್ 10ರಂದು ದಾಳಿ ನಡೆಸಿದ ಹಿರಿಯಡ್ಕ ಪೊಲೀಸರು ಸುಮಾರು 1,27,880 ರೂ. ಮೌಲ್ಯದ 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಬೊಮ್ಮರಬೆಟ್ಟುವಿನ ವಾಸುದೇವ ಪ್ರಭು (56) ಬಂಧಿತ ಆರೋಪಿ.

ಆರೋಪಿಯು ಮಾಂಬೆಟ್ಟು ಎಂಬಲ್ಲಿರುವ ತನ್ನ ಜನರಲ್ ಸ್ಟೋರ್‌ನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಉಡುಪಿಯ ಆಹಾರ ನಿರೀಕ್ಷಕರು ಮತ್ತು ಹಿರಿಯಡಕ ಠಾಣಾ ಪಿಎಸ್‌ಐ ಪುನಿತ್ ಕುಮಾರ್ ಬಿ.ಇ. ಹಾಗೂ ಸಿಬ್ಬಂದಿಗಳಾದ ಆದರ್ಶ, ಕಾರ್ತಿಕ್ ಅವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಂಗಡಿಯ ಸಿಟೌಟ್‌ನಲ್ಲಿ ಒಟ್ಟು 131 ಪ್ಲಾಸ್ಟಿಕ್ ಚೀಲಗಳಲ್ಲಿ 1,27,880 ರೂ. ಮೌಲ್ಯದ ಒಟ್ಟು 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿ ದಾಸ್ತಾನು ಮಾಡಲಾಗಿತ್ತು. ಇದನ್ನು ಪರಿಶೀಲಿಸಿದಾಗ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿ ಎಂದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *