ಉಡುಪಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನ ಆಡಿಯೋ ವೈರಲ್; ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸಿ, ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ : ಸೂರಜ್ ಶೆಟ್ಟಿ ನಕ್ರೆ ಆಗ್ರಹ

ಜನಪ್ರತಿನಿಧಿ (ಕಾರ್ಕಳ) : ಕಾರ್ಕಳದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸುಹಾಸ್ ಶೆಟ್ಟಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ಮಾತನಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಇದೊಂದು ಅಘಾತಕಾರಿ ಬೆಳವಣಿಗೆಯಾಗಿದೆ, ಪೋಲಿಸ್ ಇಲಾಖೆ ತಕ್ಷಣ ಈತನ ಮೇಲೆ  ಸುಮೋಟೋ ಕೇಸು ದಾಖಲಿಸಿ ತನಿಖೆ ನಡೆಸಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ ನಕ್ರೆ ಆಗ್ರಹಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷನಾಗಿದ್ದು ಕಾರ್ಕಳದ ಪ್ರತಿಷ್ಠಿತ ಕಾಲೇಜೊಂದರಲ್ಲಿ  ಉಪನ್ಯಾಸಕನಾಗಿರುವ ಸುಹಾಸ್ ಶೆಟ್ಟಿ,  ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ಮಾತನಾಡಿ ತಾನು ಹೇಳಿದ ಜಾಗಕ್ಕೆ ಬಾ ಎನ್ನುತ್ತಾ ತನ್ನೊಂದಿಗೆ ಸಹಕರಿಸುವಂತೆ ಪೀಡಿಸಿ ಮಾತನಾಡಿದ ಆಡಿಯೊ ವೈರಲ್ ಆಗುತ್ತಿರುವುದು ಸಭ್ಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಈ ವ್ಯಕ್ತಿಯನ್ನು ಕಾಲೇಜಿನ ಆಡಳಿತ ಮಂಡಳಿ ತಕ್ಷಣ ಈತನ ಉಪನ್ಯಾಸಕ ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಇಂತಾ ಹೆಣ್ಣುಬಾಕ ವ್ಯಕ್ತಿಯನ್ನು ಹುದ್ದೆಯಿಂದ ಮತ್ತು ಪಕ್ಷದಿಂದ ಉಚ್ಚಾಟಿಸಿ ತನ್ನ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಯುವ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದವರು ಹೇಳಿದ್ದಾರೆ.

ವಿದ್ಯಾರ್ಥಿನಿಯರೊಂದಿಗೆ ಈತನ ವರ್ತನೆ ಅಘಾತಕಾರಿಯಾಗಿದೆ, ಕಾರ್ಕಳದಲ್ಲಿ ಇಷ್ಟರವರೆಗೆ ಶಿಕ್ಷಕರು ಈ ರೀತಿಯ ವರ್ತನೆ ತೋರಿದ ಇತಿಹಾಸವಿಲ್ಲ, ಈತನ ವರ್ತನೆಯಿಂದ ಶಿಕ್ಷಕ ವರ್ಗಕ್ಕೂ ಕಳಂಕವಾಗಿದೆ. ಈ ಹಿಂದೆಯೂ ಈತ ಇಂತದ್ದೇ  ಅಸಭ್ಯ ಚಟುವಟಿಕೆ ನಡೆಸಿದ ಕಾರಣಕ್ಕೆ ಕಾರ್ಕಳದ ಪ್ರತಿಷ್ಠಿತ ಕಾಲೇಜಿನ ಉದ್ಯೋಗದಿಂದ ವಜಾಗೊಂಡಿದ್ದ.  ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿನಿಯರಿಗೆ ಪೀಡಿಸುವ ಈತನ ಆಡಿಯೊದಿಂದ ಹೆತ್ತವರು ಮತ್ತು ವಿದ್ಯಾರ್ಥಿನಿಯರು ಆತಂಕಕ್ಕೆ ಒಳಗಾಗಿದ್ದು ಈ ರೀತಿಯ  ಅನಾಚಾರದ ಕೆಲಸ ಮಾಡುವ ವ್ಯಕ್ತಿಯನ್ನು  ಬಿಜೆಪಿ ಇನ್ನೂ ಪಕ್ಷದ ಹುದ್ದೆಯಲ್ಲಿ ಮುಂದುವರಿಸಿರುವುದು ಶೋಭೆಯಲ್ಲ,  ಬಿಜೆಪಿಯ ನಾಯಕರು ಇನ್ನಾದರೂ ಎಚ್ವೆತ್ತು ಈತನನ್ನು ಪಕ್ಷದಿಂದ ವಜಾ ಮಾಡಬೇಕು ಮತ್ತು ಸಂಭಂದಪಟ್ಟ ಕಾಲೇಜಿನ ಆಡಳಿತ ಮಂಡಳಿ ಈತನನ್ನು ಉದ್ಯೋಗದಿಂದ ವಜಾ ಮಾಡಬೇಕು ಮತ್ತು ಪೋಲಿಸ್ ಇಲಾಖೆ ಈತನ ವಿರುದ್ದ ಸುಮೋಟೋ ಕೇಸು ದಾಖಲಿಸಿ ಈತನನ್ನು ಬಂಧಿಸಿ ತನಿಖೆ ನಡೆಸಬೇಕು. ಇಂತಾ ಗೋಮುಖ ವ್ಯಾಘ್ರ ಸ್ತ್ರೀ ಪೀಡಕರನ್ನು ಕಾನೂನಿನ ಕುಣಿಕೆಗೆ ಒಪ್ಪಿಸದಿದ್ದರೆ ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿನಿಯರಿಗೆ ಅಪಾಯವಿದೆ, ಹಾಗಾಗಿ ಈತನ ವಿರುದ್ದ ಪೋಲಿಸ್ ಇಲಾಖೆ ತಕ್ಷಣ ಕೇಸು ದಾಖಲಿಸಿ ಬಂಧನ ಮಾಡಬೇಕು ತಪ್ಪಿದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷರಾದ  ಸೂರಜ್ ಶೆಟ್ಟಿ ನಕ್ರೆ ಒತ್ತಾಯಿಸಿದ್ದಾರೆ.

ಬಿಜೆಪಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಅವರ ಆಪ್ತ ಎಂದು ಹೇಳಲಾಗುತ್ತಿರುವ ಸುಹಾಸ್ ಶೆಟ್ಟಿ, ವಿದ್ಯಾರ್ಥಿಯೋರ್ವಳೊಂದಿಗೆ ಫೋನ್ ಸಂಭಾಷಣೆಯಲ್ಲಿ ಅಶ್ಲೀಲವಾಗಿ ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *