ಶಿರಸಿ, ಜೂನ್ 13, 2025: ಶಿರಸಿ ನಗರದ ನಿಲೇಕಣಿ ನಾಕಾದಲ್ಲಿ ವಾಹನ ತಪಾಸಣೆ ವೇಳೆ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅನುರಾಗ (23) ಮತ್ತು ಸೋಹನ್ (23) ಎಂದು ಗುರುತಿಸಲಾಗಿದ್ದು, ಇವರು ಕುಮಟಾದಿಂದ ಶಿರಸಿಗೆ ಗಾಂಜಾ ಸಾಗಾಟ ಮಾಡಿ ಮಾರಾಟಕ್ಕೆ ತೆರಳುತ್ತಿದ್ದರು.
ಪೊಲೀಸರು ಆರೋಪಿಗಳಿಂದ ಸುಮಾರು 5,000 ರೂ. ಮೌಲ್ಯದ 101 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ 10,000 ರೂ. ಮೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್ (ಕೆಎ-31-ಇಎ-2301) ವಶಪಡಿಸಿಕೊಂಡಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(ii)(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎನ್. ಕೃಷ್ಣಮೂರ್ತಿ ಮತ್ತು ಜಗದೀಶ ಎಂ., ಶಿರಸಿ ಉಪವಿಭಾಗದ ಉಪಾಧೀಕ್ಷಕರಾದ ಗೀತಾ ಪಾಟೀಲ, ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಜರುಗಿತು. ಶಿರಸಿ ನಗರ ಠಾಣೆಯ ಪಿಎಸ್‌ಐ ನಾಗಪ್ಪ ನೇತೃತ್ವದಲ್ಲಿ ಹನುಮಂತ ಕಬಾಡಿ, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ಕ್ಯಾರಕಟ್ಟಿ, ರಾಜಶೇಖರ, ಅರುಣ ಲಮಾಣಿ, ಪ್ರವೀಣ ಎನ್. ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶಿರಸಿ ನಗರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Reply