ಅಹಮ್ಮದಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆ

ನವದೆಹಲಿ, ಜೂ. 14: ಅಹಮ್ಮದಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಪೈಕಿ 241 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಾಗಿದ್ದರೆ, ಇನ್ನುಳಿದವರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿದ್ದವರು ಹಾಗೂ ಸ್ಥಳೀಯ ನಿವಾಸಿಗಳು ಎಂದು ತಿಳಿದು ಬಂದಿದೆ.

ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿ ನಗರದಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನವಾಗಿತ್ತು. ವಿಮಾನದಲ್ಲಿದ್ದ ಏಕೈಕ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ಮಾತ್ರ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಮಾನ ಪತನದ ಕಾರಣಗಳನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತಿದೆ. ಈಗಾಗಲೇ ಒಂದು ಬ್ಲ್ಯಾಕ್ ಬಾಕ್ಸ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದ್ದು, ಎರಡನೇ ಬ್ಲ್ಯಾಕ್ ಬಾಕ್ಸ್ ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್‌ಗಾಗಿ (ಡಿವಿಆರ್) ಶೋಧ ಕಾರ್ಯ ಮುಂದುವರೆದಿದೆ.

ವಿಮಾನ ದುರಂತ ತನಿಖೆಗೆ ಸಮಿತಿ ರಚನೆ

ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚುವುದಕ್ಕಾಗಿ ನಾಗರಿಕ ವಿಮಾನಯಾನ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಏರ್ ಇಂಡಿಯಾ ವಿಮಾನ AI-171 ಅಪಘಾತದ ಕಾರಣಗಳನ್ನು ಪತ್ತೆ ಮಾಡುತ್ತದೆ. ಜೊತೆಗೆ ಭವಿಷ್ಯದಲ್ಲಿ ಇಂತಹ ವಿಮಾನ ದುರಂತಗಳನ್ನು ಎದುರಿಸಲು ಅಸ್ತಿತ್ವದಲ್ಲಿರುವ ಎಸ್‌ಒಪಿಗಳಲ್ಲಿ ಮಾಡಬೇಕಾದ ಬದಲಾವಣೆಗಳು ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಸೂಚಿಸಲಿದೆ.

Comments

Leave a Reply

Your email address will not be published. Required fields are marked *