ಬೆಳಗಾವಿ: ಮರದ ಕೆಳಗೆ ನೆರಳಿನಲ್ಲಿ, ತನ್ನ ಮೊಬೈಲ್ ನಲ್ಲಿ ರೀಲ್ಸ್ ನೋಡ್ತಾ ಮಲಗಿದ್ದ ಒಡಹುಟ್ಟಿದ ಅಣ್ಣನನ್ನು ಸ್ವಂತ ತಮ್ಮ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ಹಟ್ಟಿಆಲೂರಿನಲ್ಲಿ ನಡೆದಿದೆ. ಕುರಿಹಾಗಿ ರಾಯಪ್ಪ ಸುರೇಶ ಕಮತಿ (28) ಕೊಲೆಯಾದ ವ್ಯಕ್ತಿ.
ಈ ಘಟನೆ ಮೇ 8ರಂದು ನಡೆದಿದ್ದು ಕುರಿ ಮೇಯಿಸಲು ಜಮೀನಿಗೆ ತೆರಳಿದ್ದ ರಾಯಪ್ಪ ಸಂಜೆ ಮನೆಗೆ ಹಿಂದಿರುಗಿರಲಿಲ್ಲ.ಹೀಗಾಗಿ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ ನಂತರ ಮೇ 9 ರಂದು ಅವರ ಮೃತದೇಹ ಪತ್ತೆಯಾಗಿತ್ತು.
ಈ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೆಲ ಸಣ್ಣ ಸುಳಿವುಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ರಾಯಪ್ಪನ ಸಹೋದರ ಬಸವರಾಜನೇ ಕೊಲೆಗಾರ ಎಂಬುದು ಗೊತ್ತಾಗಿದೆ. ಈ ಬಸವರಾಜ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆದ್ರೆ ಇತ್ತೀಚೆಗೆ ಕೆಲಸ ಬಿಟ್ಟು ಬಸವರಾಜ ಹಟ್ಟಿಆಲೂರಿಗೆ ಮರಳಿದ್ದ ಮತ್ತು ಯಾವ ಕೆಲಸಕ್ಕೂ ತೆರಳದೆ ಮನೆಯಲ್ಲೇ ಉಳಿದಿದ್ದ ಕಾರಣ ರಾಯಪ್ಪ ಮತ್ತು ಈತನ ನಡುವೆ ಜಗಳವಾಗಿತ್ತಂತೆ.
ಇದರಿಂದ ಕೋಪಗೊಂಡ ಬಸವರಾಜ ಕುರಿ ಮೇಯಿಸಲು ಹೋಗಿದ್ದ ಅಣ್ಣನ ಹತ್ಯೆ ಮಾಡಿ ನಂತರ ಮನೆಗೆ ಬಂದು ರಾಯಪ್ಪ ಹುಡುಕಾಡಲು ಪ್ರಯತ್ನಿಸುತ್ತಿರುವುದಾಗಿ ಬಿಂಬಿಸಿದ್ದ ಎನ್ನಲಾಗಿದ್ದು ಅಂತಿಮವಾಗಿ ಪೊಲೀಸರ ಕೈಯಲಿ ಲಾಕ್ ಆಗಿದ್ದಾನೆ.
Leave a Reply