ಉಡುಪಿ: ಉಡುಪಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕತೆಯ ಗರಿಷ್ಠ ಮಟ್ಟದಲ್ಲಿ ನಾನು ಕೆಲಸ ಮಾಡಿದ್ದೇನೆ. ಇನ್ನು ಯಾವ ರೀತಿಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಕ್ಷ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನಿಂದ ಪಕ್ಷಕ್ಕೆ ಏನು ತೊಂದರೆಯಾಗಿದೆ ಎನ್ನುವುದು ತಿಳಿದಿಲ್ಲ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಬಹಿರಂಗವಾಗಿ ರಾಜ್ಯ ಬಿಜೆಪಿ ಘಟಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರದಲ್ಲಿ ರಾಜ್ಯಾಧ್ಯಕ್ಷರು ಸಿಕ್ಕಿದ್ದರು, ಚೆಂದ ಮಾಡಿ ಮಾತನಾಡಿಸಿದ್ದರು. ಚೆಂದ ಮಾಡಿ ಮಾತನಾಡಿಸಿದ್ದು ಯಾಕೆ ಎನ್ನುವುದು ನನಗೆ ಮತ್ತೆ ಗೊತ್ತಾಯಿತು ಎಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಪರೋಕ್ಷವಾಗಿ ಅವರು ಸಾತ್ವಿಕ ಕೋಪ ವ್ಯಕ್ತಪಡಿಸಿದರು.
ನಾನು ಕಾರ್ಯಕರ್ತರ ನಡುವೆಯೇ ಇದ್ದು ಬೆಳೆದು ಬಂದವ. ಇವತ್ತಿಗೂ ನಾನು ಯಾವ ನಾಯಕರ ಬೆನ್ನ ಹಿಂದೆ ತಿರುಗಿದವ ಅಲ್ಲ, ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆಲ್ಲಾ ಮಾಡಿದವನಲ್ಲ. ಪಕ್ಷದ ಕಾರ್ಯಕರ್ತರಿಗೆ ನಾನು ಏನು ಎನ್ನುವುದರ ಬಗ್ಗೆ ಗೊತ್ತಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಕರೆ ಮಾಡಿ ಜಿಲ್ಲಾಧ್ಯಕ್ಷರನ್ನು ಬದಲು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಶಾಸಕರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವುದಿಲ್ಲ ಎಂದಿದ್ದಕ್ಕೆ, ಶಾಸಕರನ್ನೇ ಮಾಡಿ ಯಾರನ್ನೇ ಮಾಡಿ ನನ್ನನ್ನು ಕೈ ಬಿಟ್ಟಾದ ಮೇಲೆ ನನಗೆ ಅದರ ಅವಶ್ಯಕತೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದೆ. ಕರೆ ಇಟ್ಟ ಕೆಲ ಕ್ಷಣಗಳಲ್ಲೇ ಆದೇಶ ಪತ್ರ ಬರುತ್ತದೆ. ಈ ಥರ ಎಲ್ಲಾ ಡೋಂಗಿ ಯಾಕೆ ಮಾಡಬೇಕಿತ್ತು ಎಂದು ಅವರು ಖಾರವಾಗಿಯೇ ಪಕ್ಷದ ರಾಜ್ಯ ಘಟಕದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.
ಪಕ್ಷಕ್ಕಾಗಿ, ಪಕ್ಷದ ಸಂಘಟನೆಗಾಗಿ ಸ್ವಂತ ಹಣ ವ್ಯಯ ಮಾಡಿದ್ದೇನೆ. ಅನೇಕರು ಸಹಾಯ ಮಾಡಿದ್ದಾರೆ. ಪದಾಧಿಕಾರಿಗಳು ನನ್ನೊಂದಿಗೆ ಇದ್ದು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಹಕರಿಸಿದ್ದಾರೆ. ಪಕ್ಷದ ಈ ನಿರ್ಧಾರದಿಂದ ನನಗೆ ಖಂಡಿತ ನೋವಾಗಿದೆ. ನೂತನ ಅಧ್ಯಕ್ಷರಿಗೆ ನನ್ನ ಬೆಂಬಲ ಸದಾ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಬಹುಶಃ ಜಿಲ್ಲಾಧ್ಯಕ್ಷನ ಅಧಿಕಾರ ವಹಿಸಿಕೊಂಡು ಎಂಟು ತಿಂಗಳು ಎದೆಯುಬ್ಬಿಸಿ ಅಧ್ಯಕ್ಷ ಎಂದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಎಂಟು ತಿಂಗಳಾದ ಮೇಲೆ ಪಕ್ಷದ ವದಂತಿಗಳಲ್ಲೇ ಕಾಲ ಕಳೆಯುವಂತಾಯಿತು. ಅಧ್ಯಕ್ಷನಾಗಿರುವ ಕಾಲದವರೆಗೂ ಪಕ್ಷಕ್ಕಾಗಿ ದುಡಿದ ಹಿರಿಯ ಕಿರಿಯರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದೇನೆ. ಪಕ್ಷದ ಚೌಕಟ್ಟನ್ನು ಮೀರಿ ಯಾವುದನ್ನೂ ಮಾಡಿಲ್ಲ. ಕೆಲವರು ನನ್ನ ಬಗ್ಗೆ ಕೆಟ್ಟದನ್ನು ಮಾತಾಡಿದ್ದಾರೆ. ಅವೆಲ್ಲದಕ್ಕೂ ಸ್ಪಷ್ಟನೆ ಕೊಡಬೇಕಾದ ಯಾವ ಅವಶ್ಯಕತೆಯೂ ನನಗಿಲ್ಲ. ನಾನು ನಾನೇ. ನಾನು ಏನೆಂಬುವುದನ್ನು ನನಗಿಂತ ಹೆಚ್ಚಾಗಿ ಬೇರೆ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿಲ್ಲ. ರಾಜಕಾರಣವನ್ನು ಬಿಟ್ಟು ನನಗೆ ದೊಡ್ಡ ಪ್ರಪಂಚವಿದೆ. ಹೇಗೆ ಬೆಳೆಯಬೇಕು, ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ಬಿಜೆಪಿಯ ಅವಕಾಶಕ್ಕೆ ಧನ್ಯವಾದ ಎಂದು ಹೇಳಿದರು.
ನಿರ್ಗಮನ ಅಧ್ಯಕ್ಷರಿಗೆ ಸನ್ಮಾನ ಮಾಡುವ ಪದ್ಧತಿ ಇದೆ. ಯಾವ ಸನ್ಮಾನವನ್ನೂ ನಾನು ಸ್ವೀಕರಿಸುವುದಿಲ್ಲ. ಇಲ್ಲಿ ಅಧಿಕಾರ ಹಸ್ತಾಂತರ ಎನ್ನುವುದಲ್ಲ. ಅಧಿಕಾರವನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಹಾಗಾಗಿ ನನ್ನಲ್ಲಿ ಅಧಿಕಾರ ಇಲ್ಲದೇ ಇರುವಾಗ ಅಧಿಕಾರ ಹಸ್ತಾಂತರ ಮಾಡಿದರೇ ತಪ್ಪು ಸಂದೇಶ ರವಾನೆಯಾಗುತ್ತದೆ. ಅಧಿಕಾರ ಹಸ್ತಾಂತರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳು (ಶಾಸಕ ವಿ.ಸುನೀಲ್ ಕುಮಾರ್) ಹಸ್ತಾಂತರ ಮಾಡುತ್ತಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ, ಕಾರ್ಕಳ ವಿಧಾನಸಭಾ ಶಾಸಕ ವಿ.ಸುನೀಲ್ ಕುಮಾರ್ ಕಾರ್ಕಳ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚೆಗಷ್ಟೇ, ರಾಜ್ಯದಲ್ಲಿ ಬಾಕಿ ಉಳಿದಿದ್ದ 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ರಾಜ್ಯ ಬಿಜೆಪಿ ನೇಮಕ ಮಾಡಿತ್ತು. ಕಿಶೋರ್ ಕುಮಾರ್ ಕುಂದಾಪುರ ಅವರಲ್ಲಿದ್ದ ಉಡುಪಿ ಜಿಲ್ಲೆಯ ಅಧ್ಯಕ್ಷಗಿರಿಯನ್ನು ಕಿತ್ತು ಕುತ್ಯಾರು ನವೀನ್ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿತ್ತು.
Leave a Reply