ವಿಜಯಪುರ, ಜುಲೈ 01, 2025: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ಸಂಸ್ಥಾಪಕ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೈಯದ್ ಮುಷ್ತಾಕ್ ಹೆನ್ನಾಬೈಲ್‌ರ ಕೃತಿ “ಧರ್ಮಾಧರ್ಮ” ವಿಜಯಪುರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಈ ಪುಸ್ತಕವು ಮುಸ್ಲಿಮೇತರ ಸಮುದಾಯದವರ ಮನಸ್ಸಿನಲ್ಲಿ ಕುತೂಹಲ ಮತ್ತು ಪ್ರಶ್ನೆಗಳಿಗೆ ಕಾರಣವಾಗಿರುವ ವಿಷಯಗಳಿಗೆ ಉತ್ತರವಾಗಿ ರಚಿತವಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ: ಕುಂದಾಪುರದ ಕ್ರಿಯಾಶೀಲ ಲೇಖಕ ಮುಷ್ತಾಕ್ ಹೆನ್ನಾಬೈಲ್, ರಾಜಕೀಯ ಕಾರಣಗಳಿಂದ ಹದಗೆಡುತ್ತಿರುವ ಹಿಂದೂ-ಮುಸ್ಲಿಂ ಸಂಬಂಧಗಳನ್ನು ಸರಿದಾರಿಗೆ ತರಲು ಸದಾ ಪ್ರಯತ್ನಿಸುತ್ತಿದ್ದಾರೆ. ಈ ಕೃತಿಯ 55 ಲೇಖನಗಳು ಮುಸ್ಲಿಮರ ಬಗೆಗಿನ ಪೂರ್ವಾಗ್ರಹಗಳನ್ನು ತೊಡೆದುಹಾಕುವ ಉದ್ದೇಶ ಹೊಂದಿವೆ.


ಭಾರತದಲ್ಲಿ ಮುಸ್ಲಿಮರನ್ನು ದಿನನಿತ್ಯ ಅವಮಾನಿಸಲಾಗುತ್ತಿದೆ, ಅವರ ಬಗ್ಗೆ ಸುಳ್ಳುಗಳನ್ನು ಹರಡಲಾಗುತ್ತಿದೆ. ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುವ, ಹಕ್ಕುಗಳನ್ನು ಕಸಿದುಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಮುಸ್ಲಿಮರು ತಮ್ಮದೇ ದೇಶದಲ್ಲಿ ‘ಅನ್ಯ’ರಂತೆ ಬದುಕಬೇಕಾದ ವಾತಾವರಣ ನಿರ್ಮಾಣವಾಗುತ್ತಿದೆ. ಸಾಮಾಜಿಕ-ಶೈಕ್ಷಣಿಕ ಅಭಿವೃದ್ಧಿಗೆ ಸರಕಾರದ ಅನುದಾನವನ್ನು ‘ಹಲಾಲ್ ಬಜೆಟ್’ ಎಂದು ಕರೆಯಲಾಗುತ್ತಿದೆ. ಸಂವಿಧಾನದ ರಕ್ಷಣೆ ಇದ್ದರೂ, ಮುಸ್ಲಿಮರು ತಾರತಮ್ಯ, ಪೂರ್ವಾಗ್ರಹ ಮತ್ತು ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ.
ನೂರಾರು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದ್ದ ಸಮುದಾಯಗಳನ್ನು ಪರಸ್ಪರ ವಿರೋಧಕ್ಕೆ ತಳ್ಳುವ ದುಷ್ಟ ಶಕ್ತಿಗಳ ವಿಧಾನಗಳಿಗೆ ಮುಷ್ತಾಕ್ ಈ ಕೃತಿಯಲ್ಲಿ ತಾಳ್ಮೆಯಿಂದ ಉತ್ತರಿಸಿದ್ದಾರೆ. ಮುಸ್ಲಿಮರ ಬಗ್ಗೆ ಪ್ರಚಲಿತ ಸುಳ್ಳುಗಳಿಗೆ ವಿವರಣೆ ನೀಡಿದ್ದು, ಇಂತಹ ಸುಳ್ಳುಗಳನ್ನು ಹುಟ್ಟಿಸುವವರ ಧರ್ಮದಲ್ಲಿರುವ ಒಂದೇ ರೀತಿಯ ನಂಬಿಕೆ-ಆಚರಣೆಗಳ ಕಡೆಗೆ ಗಮನ ಸೆಳೆದಿದ್ದಾರೆ.
ಈ ಸಕಾಲಿಕ ಮತ್ತು ಉಪಯುಕ್ತ ಪುಸ್ತಕ ಸಾಮಾಜಿಕ ಸೌಹಾರ್ದತೆಗೆ ಮತ್ತು ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಸಹಕಾರಿಯಾಗಲಿದೆ.
Leave a Reply