ಸಂಘ ಪರಿವಾರದ ಒತ್ತಡಕ್ಕೆ ಮಣಿದು ರಿಯಾಜ್ ಕಡಂಬು ವಿರುದ್ಧ ಪ್ರಕರಣ ದಾಖಲು: ಆಸಿಫ್ ಕೋಟೇಶ್ವರ

ಉಡುಪಿ: ಮೊನ್ನೆ ಉಡುಪಿ ಜಿಲ್ಲೆಯ ಕುಂಜಾಲುವಿನಲ್ಲಿ ದನದ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ಹೊರತಾಗಿಯೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಹೇಳಿಕೆಯನ್ನು ನೀಡಿ ಗೊಂದಲವನ್ನು ನಿರ್ಮಿಸಿದ್ದರು.

ಇದರ ವಿರುದ್ಧ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಕುಂಜಾಲುವಿನ ಘಟನೆ ನಡೆದು ಪೊಲೀಸರು ತನಿಖೆ ಆರಂಭಿಸುವುದಕ್ಕಿಂತ ಮುಂಚೆ ಇಲ್ಲಿಯ ಶಾಸಕರು ಅದನ್ನು ಒಂದು ಸಮುದಾಯದವರ ತಲೆಗೆ ಕಟ್ಟುವ ರೀತಿಯ ಹೇಳಿಕೆಯನ್ನು ನೀಡಿದ್ದರು ಹಾಗೂ ನಂತರ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ಮೇಲೂ ಸಂಘ ಪರಿವಾರದ ನಾಯಕ ಇದನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದರು.

ಈ ಎಲ್ಲ ಬೆಳವಣಿಗೆಯನ್ನು ಗಮನಿಸುವಾಗ ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಇರುವ ಶಂಕೆ ಇದೆ ಆದ್ದರಿಂದ ಪೊಲೀಸರು ಕೂಲಂಕುಶ ತನಿಖೆ ನಡೆಸಬೇಕು ಎಂದಷ್ಟೇ ಹೇಳಿದ್ದರು, ಇಲ್ಲಿ ಅವರು ಯಾವುದೇ ಧರ್ಮದ ವಿರುದ್ಧ ಹೇಳಿಕೆಯನ್ನು ನೀಡಿಲ್ಲ. ಕೇವಲ ಸಂಘ ಪರಿವಾರ ಹಾಗೂ ಬಿಜೆಪಿಯ ವಿರುದ್ಧ ಮಾತನಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಸರಕಾರ ರಿಯಾಜ್ ಕಡಂಬು ವಿರುದ್ಧ ಪ್ರಕರಣವನ್ನು ದಾಖಲಿಸಿದೆ ನಾವು ಇದರ ವಿರುದ್ಧ ಕಾನೂನು ಹೋರಾಟವನ್ನು ನಡೆಸಲಿದ್ದೇವೆ ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *