ಉಡುಪಿ, ಜುಲೈ 6, 2025: ಸಂಘಪರಿವಾರ ಹಾಗೂ ಬಿಜೆಪಿಗೆ ಕರಾವಳಿ ಜಿಲ್ಲೆಗಳು ಹಿಂದುತ್ವದ ಪ್ರಯೋಗಾಲಯಗಳಾಗಿವೆ. ಕೋಮು ಹಿಂಸೆಯನ್ನು ನಿರಂತರವಾಗಿ ಚಾಲನೆಯಲ್ಲಿ ಇಟ್ಟುಕೊಳ್ಳುವ ಇಂಡಸ್ಟ್ರೀ ಆಗಿದೆ. ಇದಕ್ಕೆ ಹಣ ಹೂಡಿಕೆ ಮಾಡುತ್ತಾರೆ ಮತ್ತು ಅದರ ಲಾಭದ ನಿರೀಕ್ಷೆಯಲ್ಲೂ ಇರುತ್ತಾರೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ಸಹಬಾಳ್ವೆ ಮತ್ತು ಮಾನವ ಬಂಧುತ್ವ ಉಡುಪಿ ವಲಯ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಇಂದು ನೀಲಾವರದಲ್ಲಿ ಹಮ್ಮಿಕೊಳ್ಳಲಾದ ಸಾಮರಸ್ಯ ನಡಿಗೆ -ಸೌಹಾರ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸಮಾಜದಲ್ಲಿ ಉದ್ರೇಕ ಎಬ್ಬಿಸಿ ಕೋಮು ಹಿಂಸೆಯನ್ನು ಜ್ವಲಂತವಾಗಿರಿಸುವ ಪ್ರಯತ್ನ ನಡೆಯುತ್ತಿದೆ. ಇದು 2000ರಿಂದ ಉಡುಪಿ ಜಿಲ್ಲೆಯಲ್ಲಿ ಮುಂದುವರೆಯುತ್ತಿದೆ. ಇವರೇ ದಾಳಿ ಮಾಡಿ, ಇವರೇ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಾರೆ ಎಂದ ಅವರು, ಕರಾವಳಿಯ ಹಿಂದುಳಿದ ಜಾತಿಯ ಯುವಕರನ್ನು ಸಂಘಪರಿವಾರ ಹಿಂಸೆಗೆ ಇಳಿಸುತ್ತದೆ ಮತ್ತು ಜೈಲುಪಾಲಾಗಿಸುತ್ತದೆ. ಮತ್ತೆ ಅವರಿಗೂ ಅವರ ಕುಟುಂಬಕ್ಕೂ ಹಣ ನೀಡುತ್ತದೆ. ಅವರ ಕೇಸ್ ನಡೆಸಲು ಕ್ರಿಮಿನಲ್ ವಕೀಲರನ್ನು ನಿಯೋಜಿಸಲಾಗುತ್ತದೆ. ಹೀಗೆ ಇದೊಂದು ಉದ್ಯಮವಾಗಿ ಬಿಟ್ಟಿದೆ ಎಂದರು.
ನಾವು ಇಂತಹ ಘಟನೆ ನಡೆದಾಗ ಕೇವಲ ಸೌಹಾರ್ದ ಮಾತನಾಡಿದರೆ ಸಾಕಾಗುವುದಿಲ್ಲ. ತಳ ಸಮುದಾಯದ ಯುವಕರು ಆ ಕಡೆ ಹೋಗದಂತೆ ತಡೆಯಬೇಕು. ಅವರೆಲ್ಲ ಜೀವನ ಹಾಗೂ ವಿದ್ಯೆ ಇಲ್ಲದ ಕಾರಣಕ್ಕೆ ಹರಣಕ್ಕಾಗಿ ಅತ್ತ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕೇರಿಗಳಿಗೆ ಭೇಟಿ ನೀಡಿ ಅವರ ಸ್ಥಿತಿ ಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಘ ಪರಿವಾರದ ಕೋಮು ಹಿಂಸೆಯ ಇಂಡಸ್ಟ್ರೀಯನ್ನು ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸೌಹಾರ್ದ ಎಂಬುದು ಸಾಮಾಜಿಕ ರಾಜಕೀಯವಾಗಿದೆ. ಅದನ್ನು ಕಾಂಗ್ರೆಸ್ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಅದನ್ನು ಮರೆತರೆ ಆ ಸೌಹಾರ್ದವನ್ನು ಸಂಘಪರಿವಾರ ಸಾರ್ವಕರ್ ಹಾಗೂ ಗೊಲ್ವಕರ್ ರಾಜಕೀಯವನ್ನು ಬಳಸಿಕೊಂಡು ನಿಮ್ಮ ಕಣ್ಣೇದುರೇ ನಾಶ ಮಾಡುತ್ತದೆ. ಅದನ್ನು ಎದುರಿ ಸಲು ಸಿದ್ಧರಾಗಬೇಕು. ಸುಧಾರಣ ವಾದಿಯಿಂದ ಸಮಾಜವನ್ನು ತಲುಪುವ ಕಾರ್ಯ ಮಾಡಬೇಕೆ ಹೊರತು ಕೇವಲ ಭಾಷಣದಿಂದ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಚಿಂತಕ ಎಂ.ಜಿ.ಹೆಗ್ಡೆ ಮಾತನಾಡಿ, ಶಾಲಾ ವಾರ್ಷಿಕೋತ್ಸವ, ಸಾಹಿತ್ಯ, ದೇವಸ್ಥಾನದ ಕಾರ್ಯಕ್ರಮಗಳಲ್ಲಿಯೂ ಧ್ವೇಷ ಭಾಷಣ ಮಾಡುವುದು ಸಾಮಾನ್ಯವಾಗಿದೆ ಮತ್ತು ಭಾಷಣದ ವ್ಯಾಖ್ಯಾನ ಕೂಡ ಆಗಿದೆ. ಧರ್ಮವನ್ನು ನಿಜವಾಗಿ ಅರ್ಥಮಾಡಿಕೊಂಡು ಪಾಲನೆ ಮಾಡುವವರಿಗೆ ಬೇರೆ ಧರ್ಮದವರನ್ನು ನೋಡಿದಾಗ ಅಸಹನೆ ಹುಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಧರ್ಮದ ಅರ್ಥ ಗೊತ್ತಿಲ್ಲದ ಹಿಂದು ಚಳವಳಿಗಳು ಹುಟ್ಟಿರುವುದೇ ಇದಕ್ಕೆಲ್ಲ ಕಾರಣವಾಗಿದೆ.ಧರ್ಮಗಳಲ್ಲಿ ವೇದಾಂತ ಯಾರಿಗೂ ಬೇಡವಾಗಿದೆ. ಅದರಲ್ಲಿ ಅಸಮಾನತೆ, ಹಿಂಸೆ ಅಸ್ಪಸೃಶ್ಯ ಅಸಹನೆ ಯಾವುದು ಇಲ್ಲ. ಆದರೆ ನಾವು ಆ ವೇದಾಂತವನ್ನು ಬಿಟ್ಟು ಜಗಳ ಕಾರಣವಾಗುವ ಆಚರಣೆಗಳನ್ನೇ ಧರ್ಮ ಎಂಂದು ನಂಬಿಕೊಂಡಿದ್ದೇವೆ. ಆಚರಣೆಗಳು ಮತಗಳ ಒಂದು ಭಾಗವಾಗಿವೇ ಹೊರತು ಅದುವೇ ಧರ್ಮ ಅಲ್ಲ ಎಂದರು.
ಅಧ್ಯಕ್ಷತೆಯನ್ನು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಸುಂದರ್ ಮಾಸ್ತರ್, ಸ್ಟಿವನ್ ವಿಕ್ಟರ್ ಲೂವೀಸ್, ಧರ್ಮಗುರು ಮುಹಮ್ಮದ್ ರಶೀದ್ ಕಣ್ಣಂಗಾರ್, ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಪ್ರಸಾದ್‌ರಾಜ್ ಕಾಂಚನ್, ರಾಘವೇಂದ್ರ ಶೆಟ್ಟಿ ಕರ್ಜೆ, ಜ್ಯೋತಿ ಹೆಬ್ಬಾರ್, ಶರ್ಫುದ್ದೀನ್ ಶೇಖ್ ಭಾಗವಹಿಸಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು. ಸತೀಶ್ ಕೊಡವೂರು ಕಾರ್ಯ ಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಬ್ರಹ್ಮಾವಾರದ ಕುಂಜಾಲು ಕೇಳಪೇಟೆಯಿಂದ ನೀಲಾವರ ಕ್ರಾಸ್‌ವರೆಗೆ ಸಾಮರಸ್ಯ ನಡಿಗೆ ಜರಗಿತು.
‘ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗೊಡ್ಡದ ಹಸುವನ್ನು ರೈತರು ಮಾರಾಟ ಮಾಡುತ್ತಾರೆ. ಅದು ಮಾಂಸಕ್ಕೆ ಹೋಗುತ್ತದೆ ಎಂಬುದು ಕೂಡ ಅವರಿಗೆ ತಿಳಿದು ಇರುತ್ತದೆ. ಆದರೆ ಇಂತಹ ವಿಚಾರಗಳನ್ನು ಇಟ್ಟು ಕೊಂಡು ಯಶ್‌ಪಾಲ್ ಸುವರ್ಣಗೆ ಬೆಂಕಿ ಹಚ್ಚಲು ಐದು ನಿಮಿಷ ಸಾಕಾಗುತ್ತದೆ, ಆದರೆ ಆ ಬೆಂಕಿಯನ್ನು ಆರಿಸಲು 10 ದಿನ ಬೇಕಾಗುತ್ತದೆ’ – ಪ್ರೊ.ಫಣಿರಾಜ್, ಹಿರಿಯ ಚಿಂತಕರು
Leave a Reply