ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇದೆ: ಡಾ.ಜಿ.ಪರಮೇಶ್ವರ್ 

ಕಾರ್ಕಳ: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವುದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್  ಆರೋಪಿಸಿದ್ದಾರೆ.

ಕಾರ್ಕಳದ ಬೆಳ್ಮಣ್ಣಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಸಕಾಲದಲ್ಲಿ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಈಗ 18 ಸಾವಿರ ಹುದ್ದೆಗಳು ಖಾಲಿ ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಉಂಟಾಗಿದೆ. ನಿವೃತ್ತರಾದವರ ಜಾಗಕ್ಕೆ ನೇಮಕಾತಿ ಮಾಡಿಕೊಳ್ಳಬೇಕಿತ್ತು, ಆದರೆ ಹಾಗೆ ಆಗಿಲ್ಲ. ಈಗ ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ ಎಂದು ಗೃಹ ಸಚಿವರು ತಿಳಿಸಿದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬದ ಬಗ್ಗೆ ಮಾತನಾಡಿದ ಅವರು, “ಒಳಮೀಸಲಾತಿ ವಿಚಾರದಿಂದಾಗಿ ಎರಡು-ಮೂರು ತಿಂಗಳು ವಿಳಂಬವಾಗಿದೆ. ಈಗ ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ಪಿಎಸ್‌ಐ ಹಗರಣದಿಂದಾದ ವಿಳಂಬ:
ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು. “545 ಪಿಎಸ್‌ಐ ಹುದ್ದೆಗಳ ನೇಮಕಾತಿ ವೇಳೆ ಹಗರಣ ನಡೆದಿತ್ತು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಯೇ ನಿಲ್ಲುವಂತಾಗಿತ್ತು. ಈಗ ನಾವು ಈಗಾಗಲೇ 545 ಮಂದಿಗೆ ನೇಮಕಾತಿ ಆದೇಶ ನೀಡಿದ್ದೇವೆ. ಇನ್ನು 402 ಮಂದಿಗೆ ಒಂದು ವಾರದಿಂದ ಹದಿನೈದು ದಿನಗಳಲ್ಲಿ ಆದೇಶ ನೀಡುತ್ತೇವೆ,” ಎಂದು ಪರಮೇಶ್ವರ್ ಭರವಸೆ ನೀಡಿದರು.

ಎಸ್‌ಐಗಳ ನೇಮಕ್ಕೆ ಕ್ರಮ:
ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 600 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. “ಒಂದೂವರೆ ಸಾವಿರ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಖಾಲಿ ಇಟ್ಟುಕೊಂಡರೆ ಸಮಸ್ಯೆಯಾಗದೆ ಇರುತ್ತಾ?” ಎಂದು ಪ್ರಶ್ನಿಸುವ ಮೂಲಕ ಹಿಂದಿನ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *