ಉಡುಪಿ ಜಿಲ್ಲಾದ್ಯಂತ ಕಾರ್ಮಿಕರಿಂದ ಸಾರ್ವತ್ರಿಕ ಮುಷ್ಕರ: ವಿವಿಧೆಡೆ ಪ್ರತಿಭಟನೆ

ಉಡುಪಿ, ಜುಲೈ 9, 2025: ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮಾಡದಂತೆ ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಉಡುಪಿ ಜಿಲ್ಲೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾರ್ಮಿಕರು ಬುಧವಾರ ಮುಷ್ಕರ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಗಳನ್ನು ವಿರೋಧಿಸಿ ಕಟ್ಟಡ, ಅಂಗನವಾಡಿ, ಬಿಸಿಯೂಟ, ಹೆಂಚು, ಬೀಡಿ, ಕೆಲವು ಫ್ಯಾಕ್ಟರಿಗಳ ಕಾರ್ಮಿಕರು, ಬ್ಯಾಂಕ್, ವಿಮಾ ಹಾಗೂ ಅಂಚೆ ನೌಕರರು ಕೆಲಸಕ್ಕೆ ಹೋಗದೆ ಮುಷ್ಕರ ನಡೆಸಿ, ಜೆಸಿಟಿಯ ನೇತೃತ್ವದಲ್ಲಿ ಉಡುಪಿ, ಕುಂದಾಪುರ ಹಾಗೂ ಬೈಂದೂರಿನಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಉಡುಪಿಯ ಹಳೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸಿಐಟಿಯು ಕಚೇರಿಯಿಂದ ಪ್ರಧಾನ ಅಂಚೆ ಕಚೇರಿಯವರೆಗೆ ಕಾರ್ಮಿಕರು ಮೆರವಣಿಗೆ ನಡೆಸಿದರು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಹಲವು ವರ್ಷಗಳ ಕಾಲ ಹೋರಾಟ ಮಾಡಿ ಪಡೆದ 44 ಕಾರ್ಮಿಕ ಕಾನೂನುಗಳ ಪೈಕಿ 15 ಕಾನೂನುಗಳನ್ನು ಕೇಂದ್ರ ಸರಕಾರ ರದ್ದು ಮಾಡಿದೆ. ಉಳಿದ 29 ಕಾನೂನುಗಳನ್ನು ನಾಲ್ಕು ಸಂಹಿತೆಯನ್ನಾಗಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳ ಲಾಗಿದೆ. ಆದುದರಿಂದ ಇದು ಕಾರ್ಮಿಕರ ಅಳಿವು ಉಳಿವಿನ ಹೋರಾಟವಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಕೆಂಪುಕಲ್ಲು, ಶಿಲೆ/ಪಾದೆಕಲ್ಲು ಹಾಗೂ ಮರಳಿನ ಕೊರತೆ ಎದುರಾಗಿದೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ತೊಂದರೆ ಉಂಟಾಗಿದೆ. ಮನೆ ಕಟ್ಟುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಗಮನ ನೀಡಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಎಸ್. ಕಾಂಚನ್, ಎಐಐಇಎ ಮುಖಂಡ ಕೆ.ವಿಶ್ವನಾಥ್, ಎಐಟಿಯುಸಿ ಮುಖಂಡ ಯು.ಶಿವಾನಂದ, ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ಶಶಿಧರ್ ಗೊಲ್ಲ, ಸುನೀತಾ ಶೆಟ್ಟಿ, ರಾಮ ಕಾರ್ಕಡ, ಇಂಟಕ್ ಮುಖಂಡ ಕಿರಣ್ ಹೆಗ್ಡೆ, ಎಐಬಿಇಎ ನಾಗೇಶ್ ನಾಯಕ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭಾರತಿ, ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ಖಜಾಂಚಿ ಯಶೋಧಾ, ಉಪಾಧ್ಯಕ್ಷೆ ಪ್ರೇಮಾ ಮೊದಲಾದವರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *