ಪ್ರಚೋದನಾಕಾರಿ ಹೇಳಿಕೆ ಪ್ರಕರಣ: ಶರಣ್ ಪಂಪ್‌ವೆಲ್ ವಿರುದ್ಧ ಬಂಧನ ಸಹಿತ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಜುಲೈ 9, 2025: ಪ್ರಚೋದನಾಕಾರಿ ಹೇಳಿಕೆ ಪ್ರಕರಣ ಸಂಬಂಧ ಉಡುಪಿ ಪೊಲೀಸರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಬಲವಂತದ ಬಂಧನ ಅಥವಾ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಪೀಠ ಶರಣ್ ಪಂಪ್ ವೆಲ್ ಸಲ್ಲಿಸಿದ ಎಫ್ಐಆರ್ ರದ್ದುಗೊಳಿಸುವ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ವಿಚಾರಣೆಯಲ್ಲಿ ಪೊಲೀಸರಿಗೆ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿದ ಪೀಠ, ಶರಣ್ ಪಂಪ್ ವೆಲ್‌ಗೆ ಪೊಲೀಸರ ತನಿಖೆಯಲ್ಲಿ ಸಹಕರಿಸುವಂತೆ ತಾಕೀತು ಮಾಡಿದೆ. ಶರಣ್ ವಿರುದ್ಧ ದ್ವೇಷ ಭಾಷಣದ ಆರೋಪ ಇಡಲಾಗಿದ್ದು, ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಅವರ ಪರ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದ್ದರು. ಈ ವಾದವನ್ನು ಆಲಿಸಿ ಹೈಕೋರ್ಟ್ ತೀರ್ಪು ನೀಡಿದೆ.

ಇನ್ನೊಂದೆಡೆ, ಕಡಬ ಪೊಲೀಸರ ಎಫ್ಐಆರ್‌ಗೆ ಸವಾಲು ಎದುರಿಸಿದ ವಿಎಚ್‌ಪಿ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ನವೀನ್ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ, ಹೈಕೋರ್ಟ್ ಎಫ್ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅರುಣ್ ಶ್ಯಾಮ್ ತಮ್ಮ ವಾದದಲ್ಲಿ, ಯಾವುದೇ ಅಪರಾಧಾಂಶವಿಲ್ಲದೆ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದರು. ಈ ವಾದವನ್ನು ಪರಿಗಣಿಸಿ ಪೀಠ ತಡೆಯಾಜ್ಞೆ ಘೋಷಿಸಿದೆ.

Comments

Leave a Reply

Your email address will not be published. Required fields are marked *