ಕಾರವಾರ, ಜೂಲೈ 8, 2025: ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 4(ಎ) ಕುಸಿತಗೊಂಡಿರುವ ಕಾರಣ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ, ದಿನಾಂಕ 07-07-2025ರಂದು ರಾಮನಗರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಮಹಂತೇಶ ಉದಯ ನಾಯಕ್ ಅವರು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ, ರಾಮನಗರದ ಶಿವಾಜಿ ಸರ್ಕಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಶ್ರೀ ರಾಜಪ್ಪ ದೊಡ್ಡಮನಿ ಅವರು ಬೆಳಗಾವಿಯಿಂದ ಬಂದ ಟಾಟಾ ಯೋಧಾ ವಾಹನ (ನಂ: ಕೆಎ-25/ಎಬಿ-6640)ವನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ, ಚಾಲಕ ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಅನಮೋಡ ಕಡೆಗೆ ತೆರಳಿದ್ದಾನೆ.

ಚಾಲಕನ ಸಂಶಯಾಸ್ಪದ ನಡವಳಿಕೆಯ ಬಗ್ಗೆ ಪಿಎಸ್‌ಐಗೆ ಮಾಹಿತಿ ನೀಡಿದಾಗ, ರಾಮನಗರದ ಜಾಮೀಯಾ ಮಸೀದಿ ಬಳಿ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ವಾಹನದಲ್ಲಿದ್ದ ಆರೋಪಿತರಾದ ಚಾಲಕ ಸಿದ್ದಪ್ಪ ಬಾಳಪ್ಪ ಬೂದ್ದೂರ ಮತ್ತು ಕ್ಲೀನರ್ ರಾಜು ಬಾಳು ನಾಯ್ಕ ಇವರು ವಾಹನದಲ್ಲಿ ದನದ ಮಾಂಸವಿದೆ ಎಂದು ತಿಳಿಸಿದರು. ಪಂಚರ ಸಮಕ್ಷಮದಲ್ಲಿ ವಾಹನವನ್ನು ಪರಿಶೀಲಿಸಿದಾಗ 3,930 ಕೆ.ಜಿ. ದನದ ಮಾಂಸ ಕಂಡುಬಂದಿದ್ದು, ಇದರ ಅಂದಾಜು ಮೌಲ್ಯ 6,75,500 ರೂ. ಆಗಿದೆ. ಆರೋಪಿತರನ್ನು ವಿಚಾರಿಸಿದಾಗ, ಈ ಸ್ವತ್ತು ಬೆಳಗಾವಿಯ ಅಮೋಲ ಮೋಹನದಾಸ್‌ಗೆ ಸೇರಿದ್ದು, ದನದ ಮಾಂಸವನ್ನು ಬೆಳಗಾವಿಯಿಂದ ಗೋವಾಕ್ಕೆ ಸಾಗಿಸಿ ಮಾರಾಟ ಮಾಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ.
ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿ, 3,930 ಕೆ.ಜಿ. ದನದ ಮಾಂಸ (ಮೌಲ್ಯ 6,75,500 ರೂ.) ಮತ್ತು ಟಾಟಾ ಯೋಧಾ ವಾಹನ (ನಂ: ಕೆಎ-25/ಎಬಿ-6640, ಮೌಲ್ಯ 8,00,000 ರೂ.)ವನ್ನು ಜಪ್ತು ಮಾಡಿಕೊಂಡಿದ್ದಾರೆ. ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 68/2025ರ ಅಡಿಯಲ್ಲಿ ಕರ್ನಾಟಕ ಗೋವುಗಳ ಕಡಿತ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 7, 12 , ಕಲಂ 325 ಭಾರತೀಯ ನ್ಯಾಯ ಸಂಹಿತೆ, IMV 192 (a)ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Leave a Reply