ಬೆಂಗಳೂರು, ಜೂಲೈ 9, 2025: ಆನ್ಲೈನ್ ಬೆಟ್ಟಿಂಗ್ ಆಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಯನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ. ಎನ್. ಮೂರ್ತಿ (27) ಬಂಧಿತ. ಈತನಿಂದ 17 ಲಕ್ಷ ಬೆಲೆಯ 245 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಮೂಲದ ಆರೋಪಿ ಬಿಸಿಎ ಪಧವೀಧರನಾಗಿದ್ದು, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬೇಗೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದ.
ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಆನ್ಲೈನ್ ಬೆಟ್ಟಿಂಗ್ ದಾಸನಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ. ಸಾಲಗಾರರು ಈತನ ಬೆನ್ನುಬಿದ್ದಿದ್ದರು. ಸಾಲ ತೀರಿಸಲು ಹಾಗೂ ಬೆಟ್ಟಿಂಗ್ ಆಡಲು ಮನೆಗಳ್ಳತನ ಹಾಗೂ ಸರಗಳ್ಳತನ ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪನ ಆಸ್ತಿ ಮಾರಿದರೂ ಬುದ್ಧಿ ಕಲಿಯದ ಮಗ : ಆರೋಪಿ ತಂದೆ ಅಣ್ಣಪ್ಪ ಶಿವಮೊಗ್ಗದಲ್ಲಿ ನೆಲೆಸಿದ್ದು, ಮಗ ಮಾಡಿಕೊಂಡ ಎಡವಟ್ಟಿನಿಂದ ಊರಿನಲ್ಲಿ ಜಮೀನು ಮಾರಿ ಸುಮಾರು 25 ಲಕ್ಷದವರೆಗೂ ಸಾಲ ತೀರಿಸಿದ್ದರು. ಇನ್ನಷ್ಟು ಸಾಲ ತೀರಿಸಲು ನಗರಕ್ಕೆ ಬಂದು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.
ಇಷ್ಟಾದರೂ ಮಗನ ಆನ್ಲೈನ್ ಬೆಟ್ಟಿಂಗ್ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಸುಲಭ ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಪರಾಧ ಎಸಗುವುದನ್ನ ಆರೋಪಿ ರೂಢಿಗತ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಸರ ಕದ್ದ ಪ್ರಕರಣದಲ್ಲಿ ಮತ್ತೆ ಬಂಧಿತನಾದಾಗ ಕಳಚಿತು ಮುಖವಾಡ: ಬಿನ್ನಿಮಿಲ್ ಅಂಗಾಳಪರಮೇಶ್ವರಿ ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿರುವಾಗ ಮಹಿಳೆ ಸರ ಕಸಿದುಕೊಂಡು ಈತ ಪರಾರಿಯಾಗಿದ್ದ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಜಿ. ಪಿ. ರಾಜು ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2022ರಿಂದಲೂ ರಾಜಗೋಪಾಲನಗರ, ಸುದ್ದುಗುಂಟೆಪಾಳ್ಯ, ಆವಲಹಳ್ಳ ಹಾಗೂ ಕೋಣನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ತಿಳಿದುಬಂದಿದೆ ಎಂದರು.
ಕದ್ದ ಚಿನ್ನಾಭರಣವನ್ನ ಮಡಿವಾಳ, ಪರಪ್ಪನ ಅಗ್ರಹಾರ ಏರಿಯಾ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜ್ಯುವೆಲ್ಲರಿ ಶಾಪ್ಗಳಲ್ಲಿ ಅಡವಿಟ್ಟು ಹಣ ಸಂಪಾದಿಸಿ ಬೆಟ್ಟಿಂಗ್ ಆಡುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Leave a Reply