ಉಡುಪಿ: ದೈಹಿಕ ಕ್ಷಮತೆಗಾಗಿ ಜಿಲ್ಲಾ ಪೊಲೀಸರಿಗೆ ನವಚೇತನ ಶಿಬಿರ

ಉಡುಪಿ, ಜುಲೈ 10, 2025: ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಲ್ಲಿ ಆಯ್ದ 71 ಮಂದಿಗೆ ಉತ್ತಮ ಆರೋಗ್ಯವನ್ನು ಹೊಂದಲು ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಲು 30 ದಿನಗಳ ಉಚಿತ ನವಚೇತನ ಶಿಬಿರವೊಂದನ್ನು ಪರ್ಕಳ ಸಮೀಪದಲ್ಲಿರುವ ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯ ಒಟ್ಟು 71 ಮಂದಿ ಪೊಲೀಸರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಇವರಲ್ಲಿ 62 ಮಂದಿ ಪುರುಷರು ಹಾಗೂ 9 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಒಬ್ಬ ಎಸ್‌ಐ, 12 ಮಂದಿ ಎಎಎಸ್‌ಐ, 35 ಮಂದಿ ಹೆಡ್ ಕಾನ್‌ಸ್ಟೇಬರ್‌ಗಳು ಹಾಗೂ 23 ಮಂದಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ಶಿಬಿರದಲ್ಲಿ ದೇಹ ದಂಡನೆಯ ಮೂಲಕ ತಮ್ಮ ಫಿಟ್ನೆಸ್‌ನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ.

ಶಿಬಿರದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಯೋಗ, ಪಿ.ಟಿ., ಝುಂಬಾ, ಜಿಮ್ ಹಾಗೂ ಕರಾಟೆಯನ್ನು ಆಯಾ ಕ್ಷೇತ್ರದ ತಜ್ಞರಿಂದ ಕಲಿಸಿ ಅಭ್ಯಸಿಸಲಾಗು ತ್ತದೆ. ಅಲ್ಲದೇ ಒತ್ತಡ ರಹಿತ ಉತ್ತಮ ಜೀವನ ನಡೆಸಲು ಅಗತ್ಯವಿರುವ ಹಲವು ವಿಷಯಗಳ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಶಿಬಿರಾರ್ಥಿಗಳು ಶಿಬಿರದ ಅವಧಿಯುದ್ದಕ್ಕೂ ಸೌಖ್ಯವನದ ‘ಪಥ್ಯಾಹಾರ’ವನ್ನೇ ಅವಲಂಬಿಸಬೇಕಾಗಿದೆ.

ಜು.1ರಂದು ಉದ್ಘಾಟನೆಗೊಂಡ ಈ ಶಿಬಿರ ಒಂದು ತಿಂಗಳ ಕಾಲ ನಡೆಯಲಿದೆ. ಈ ಶಿಬಿರ ಪೊಲೀಸರ ದೈಹಿಕ ಕ್ಷಮತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಬೇಡುವ ಪೊಲೀಸ್ ವೃತ್ತಿಯಲ್ಲಿರುವವರು ವಿವಿಧ ಕಾರಣಗಳಿಂದ ಕೆಲವೇ ವರ್ಷಗಳಲ್ಲಿ ಬೊಜ್ಜು ಬೆಳೆಸಿಕೊ ಳ್ಳುವುದು, ವಿವಿಧ ಕಾಯಿಲೆಗಳಿಗೆ ತುತ್ತಾಗುವುದು ಸಾಮಾನ್ಯವೆನಿಸಿದೆ. ಇವುಗಳಿಗೆಲ್ಲಾ ಪರೀಕದ ಪ್ರಕೃತಿ ಚಿಕಿತ್ಸಾ ಪದ್ಧತಿ ರಾಮಬಾಣವೆನಿಸಿಕೊಳ್ಳುವ ನಿರೀಕ್ಷೆ ಪೊಲೀಸ್ ಇಲಾಖೆಯದು.

ಇಂದು ಬೆಳಗಿನ ಶಿಬಿರದಲ್ಲಿ ವ್ಯಾಯಾಮ ಹಾಗೂ ಇತರ ಚಟುವಟಿಕೆಯ ಸಂದರ್ಭದಲ್ಲಿ ಪರೀಕದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು, ‘ಇದು ಕೇವಲ ಬೊಜ್ಜು ಕರಗಿಸುವ ಕಾರ್ಯಕ್ರಮವಲ್ಲ. ಪೊಲೀಸ್ ಸಿಬ್ಬಂದಿಗಳ ಸಂಪೂರ್ಣ ಆರೋಗ್ಯ ಹಾಗೂ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿದೆ’ ಎಂದರು.

‘ಕೊಲೆಸ್ಟ್ರಾಲ್, ಹೈ ಬ್ಲಡ್ ಶುಗರ್ ಸಮಸ್ಯೆ ಇರುವವರಿಗೆ ಇದು ಬಹಳ ಉಪಯುಕ್ತವಾಗುತ್ತದೆ. ಇಲ್ಲಿನ ಕಟ್ಟುನಿಟ್ಟಿನ ಡಯಟ್ ಹಾಗೂ ವ್ಯಾಯಾಮದಿಂದ ಖಂಡಿತ ಉಪಯೋಗವಾಗುವ ನಿರೀಕ್ಷೆ ಇದೆ. ಇದು ‘ರಿಲಾಕ್ಸ್’ ಆಗುವ ಶಿಬಿರ ಅಲ್ಲ. ದೈಹಿಕ ಕ್ಷಮತೆಗಾಗಿ ತರಬೇತಿ ಕಾರ್ಯಕ್ರಮ ಗಳು ಬೆಳಗ್ಗೆ 7:00ರಿಂದ ಸಂಜೆ 6:00ಗಂಟೆಯವರೆಗೆ ಆರು ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತವೆ ಎಂದು ಅವರು ವಿವರಿಸಿದರು.

ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಯಲ್ಲಿ ಪುನಶ್ಚೇತನಕ್ಕಾಗಿ ಬರುವ ಶಿಬಿರಾರ್ಥಿಗಳಿಗೆ ನೀಡುವ ತರಬೇತಿ, ವಿವಿಧ ಚಿಕಿತ್ಸೆ, ಆಹಾರ ಹಾಗೂ ಪಾನೀಯಗಳನ್ನು ಪೊಲೀಸರಿಗೂ ನೀಡಲಾಗುತ್ತಿದೆ. ಯೋಗ ತರಬೇತಿಯನ್ನು ಎಸ್‌ಡಿಎಂ ಆಸ್ಪತ್ರೆಯ ಯೋಗ ಶಿಕ್ಷಕರು ನೀಡಿದರೆ, ಪೊಲೀಸ್ ಡ್ರಿಲ್, ಪೆರೇಡ್‌ನ್ನು ನಮ್ಮದೇ ಸಿಬ್ಬಂದಿಗಳು ನಡೆಸುತಿದ್ದಾರೆ. ಪ್ರತಿದಿನ ಇವರಿಂದ ಕನಿಷ್ಠ 10 ಕಿ.ಮೀ.ಗಳ ವಾಕಿಂಗ್ ಮಾಡಿಸಲಾಗುತ್ತದೆ. ಕರಾಟೆ ಹಾಗೂ ಝುಂಬಾ ತರಬೇತಿಯನ್ನು ಹೊರಗಿನ ಎಜೆನ್ಸಿಯಿಂದ ನೀಡಲಾಗುತ್ತಿದೆ ಎಂದು ಹರಿರಾಮ್ ಶಂಕರ್ ವಿವರಿಸಿದರು.

ಪೊಲೀಸ್ ಇಲಾಖೆಗೆ ಸೇರುವ ಸಮಯದಲ್ಲಿ ನಮ್ಮ ಯುವಕರು ದೈಹಿಕವಾಗಿ ಅತ್ಯಂತ ಸದೃಢರಾಗಿರು ತ್ತಾರೆ. ಆದರೆ ಕೆಲಸದ ಒತ್ತಡ ಹಾಗೂ ಇತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿ ಸಲು ಸಾಧ್ಯವಾಗದೇ ಅವರಲ್ಲಿ ದೈಹಿಕವಾಗಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಲಾಖೆಯ ಕೆಲಸದಿಂದಾಗಿ ಅವರಿಗೆ ಈ ಸಮಸ್ಯೆಯಾಗಿರುವುದರಿಂದ ಇಲಾಖೆಯೇ ಅದರ ಪರಿಹಾರ ತೋರಿಸಬೇಕೆನ್ನುವ ಕಾರಣಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಕೊನೆಯಲ್ಲಿ ಉತ್ತಮ ಪಲಿತಾಂಶ ಬರಲಿದೆ ಎಂಬುದು ನಮ್ಮ ವಿಶ್ವಾಸ ಎಂದು ಹರಿರಾಮ್ ಶಂಕರ್ ನುಡಿದರು.

“ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ 71 ಮಂದಿ ಆಯ್ದ ಪೊಲೀಸ್ ಸಿಬ್ಬಂದಿಗಳಿಗೆ ಪರೀಕದಲ್ಲಿ ಆಯೋಜಿಸಿರುವ ಒಂದು ತಿಂಗಳ ‘ನವಚೇತನ ಶಿಬಿರ’ ಬೊಜ್ಜು ಕರಗಿಸುವ ಕಾರ್ಯಕ್ರಮವಲ್ಲ. ಇದು ಪೊಲೀಸರ ಆರೋಗ್ಯವನ್ನು ಸುಧಾರಿಸುವ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ತರಬೇತಿ ಕಾರ್ಯಕ್ರಮ”-ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

“ಬಿಎಂಐ ಹೆಚ್ಚಿರುವವರಿಗೆ ಅದನ್ನು ಇಳಿಸಲು ಪರೀಕದಲ್ಲಿ ನವಚೇತನ ಶಿಬಿರವನ್ನು ಏರ್ಪಡಿಸುವ ಮೂಲಕ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆಶಯವನ್ನು ಒಂದು ತಿಂಗಳ ಅವಧಿಯಲ್ಲಿ ಶೇ.100ರಷ್ಟು ಈಡೇರಿಸುವ ವಿಶ್ವಾಸ ನಮಗಿದೆ. ಮೊದಲು ಕಷ್ಟವಾದರೂ ಈಗ ತರಬೇತಿಗೆ ಸಂಪೂರ್ಣವಾಗಿ ಹೊಂದಿಕೊಂಡು ಆನಂದಿಸುತಿದ್ದೇವೆ. ನಮ್ಮಗಳ ಚಟುವಟಿಕೆಯಿಂದ ನಮ್ಮ ಮನೆಯವರಿಗೂ ಖುಷಿಯಾಗಿದೆ. ಅವರೂ ಎಸ್ಪಿ ಸಾಹೇಬರಿಗೆ ಧನ್ಯವಾದ ತಿಳಿಸಿದ್ದಾರೆ”.-ರಾಜೇಂದ್ರ ಮಣಿಯಾಣಿ, ಎಎಸ್‌ಐ ಶಂಕರನಾರಾಯಣ ಠಾಣೆ.

Comments

Leave a Reply

Your email address will not be published. Required fields are marked *