ದಾಂಡೇಲಿ, ಜುಲೈ 12, 2025: ದಾಂಡೇಲಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಂದೆ-ತಾಯಿಯೊಬ್ಬರು ತಮ್ಮ 20 ದಿನದ ಗಂಡು ಮಗುವನ್ನು ಮಾರಾಟ ಮಾಡಿದ ಆರೋಪದಡಿ ಆರೋಪಿತರನ್ನು ಬಂಧಿಸಲಾಗಿದೆ ಎಂದು ದಾಂಡೇಲಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 79/2025 ರಡಿ ದಾಖಲಾದ ಪ್ರಕರಣದಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 143(2), 8(2) ಸಹಿತ 3(5) ಮತ್ತು ಜೆ.ಜೆ. ಆಕ್ಟ್ 2015 ರ ಕಲಂ 81 ರಡಿ ದೂರು ದಾಖಲಾಗಿದೆ. ದಿನಾಂಕ 02/07/2025 ರಂದು ಸಂಜೆ 6:15 ಗಂಟೆಗೆ ಫಿರ್ಯಾದುದಾರರಾದ ರೇಷ್ಮಾ ಕೊಂ ಮಹಾದೇವ ಪವಾಸ್ಕರ (ವಯಸ್ಸು 40, ಅಂಗನವಾಡಿ ಕಾರ್ಯಕರ್ತೆ, ಕೊಗಿಲಬಾನ, ದಾಂಡೇಲಿ) ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಹಳೆ ದಾಂಡೇಲಿಯ ಸ್ವಾಮಿಲ್ ರೋಡ್‌ನ ನಿವಾಸಿಯಾದ ಮಾಹಿನ ವಸೀಂ ಚಂಡುಪಟೇಲ್ (ವಯಸ್ಸು 23) ದಿನಾಂಕ 17/06/2025 ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆರೋಪಿತಳು ತೀವ್ರ ಸಾಲದ ಸುಳಿಯಲ್ಲಿದ್ದು, ಸಂಘದ ಸಾಲಗಾರರು ಪದೇ ಪದೇ ಹಣವನ್ನು ಕೊಡುವಂತೆ ಕಿರಿಕಿರಿ ಮಾಡುತ್ತಿದ್ದರಿಂದ, ಮಾಹಿನ ವಸೀಂ ಚಂಡುಪಟೇಲ್ ಮತ್ತು ಆಕೆಯ ಗಂಡ ವಸೀಂ ನಜೀರ ಚಂಡುಪಟೇಲ್ ಇಬ್ಬರೂ ಸೇರಿಕೊಂಡು ತಮ್ಮ 20 ದಿನದ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ದಿನಾಂಕ 08/07/2025 ರಂದು ಧಾರವಾಡಕ್ಕೆ ತೆರಳಿ, ಬೆಳಗಾವಿಯ ನೂರ್ ಮೊಹಮ್ಮದ್ ಎಂಬಾತನಿಗೆ 3 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಾರೆ.
ಈ ದೂರನ್ನು ಸ್ವೀಕರಿಸಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಅಮೀನಸಾಬ ಎಮ್. ಅತ್ತಾರ್ ರವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಎಸ್., ಜಗದೀಶ ಎಂ., ಮತ್ತು ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿ.ಪಿ.ಐ ಜಯಪಾಲ ಪಾಟೀಲ್ (ಪ್ರಭಾರ) ರವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿದೆ.
ತಂಡದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಮೀನಸಾಬ ಎಮ್. ಅತ್ತಾರ್ (ಪಿ.ಎಸ್.ಐ., ಕಾನೂನು ಮತ್ತು ಸುವ್ಯವಸ್ಥೆ), ಕಿರಣ ಜೆ. ಪಾಟೀಲ್ (ಪಿ.ಎಸ್.ಐ.), ಎ.ಎಸ್.ಐ. ಬಸವರಾಜ ಒಕ್ಕುಂದ, ಸಿ.ಎಚ್.ಸಿ. 1545 ಸಿದ್ರಾಮ್ ರಾಮರಾಠ, ಸಿ.ಪಿ.ಸಿ. 1696 ಚಂದ್ರಶೇಖರ ಪಾಟೀಲ್, ಡಬ್ಲ್ಯೂ.ಪಿ.ಸಿ. 517 ಜ್ಯೋತಿ ಚಾಳೇಕರ ಮತ್ತು ಚಾಲಕ ಮಹಾಂತೇಶ ಜಾಮಗೌಡ ಸೇರಿದ್ದಾರೆ. ಈ ತಂಡವು ಖಚಿತ ಮಾಹಿತಿಯ ಆಧಾರದ ಮೇಲೆ ಬೆಳಗಾವಿಗೆ ತೆರಳಿ, ಆರೋಪಿತರನ್ನು ಬಂಧಿಸಿ, ಮಾರಾಟವಾದ ಮಗುವನ್ನು ರಕ್ಷಣೆ ಮಾಡಿಕೊಂಡು ಬಂದಿದೆ. ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ-2, ಶಿರಸಿಗೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ಬಂಧಿತ ಆರೋಪಿತರ ವಿವರ:
- ಎ-1: ನೂರ್ ಮೊಹಮ್ಮದ್, ತಂದೆ ಅಬ್ದುಲ್ ಮಜೀದ ನಾಯ್ಕ, ವಯಸ್ಸು 47, ವೃತ್ತಿ: ಚಿತ್ರಕಲೆ ಕೆಲಸ, ಸ್ಥಳ: ಆನಗೋಳ, ಬೆಳಗಾವಿ
- ಎ-2: ಕಿಶನ, ತಂದೆ ಶ್ರೀಕಾಂತ ಐರೇಕರ, ವಯಸ್ಸು 42, ವೃತ್ತಿ: ಚಾಲಕ, ಸ್ಥಳ: ಎಸ್.ವಿ. ರೋಡ್, ಆನಗೋಳ, ಬೆಳಗಾವಿ
ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿತರನ್ನು ಪತ್ತೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ.
Leave a Reply