ಜುಲೈ14 ರಂದು ಉಡುಪಿಯಲ್ಲಿ ಎಸ್ ವೈ ಎಸ್ ಸೌಹಾರ್ದ ಸಂಚಾರ ಕಾರ್ಯಕ್ರಮ

ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ವತಿಯಿಂದ ಜುಲೈ 14ರಿಂದ 16 ರ ವರೆಗೆ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜುಲೈ 14 ರಂದು ಉಡುಪಿಗೆ ಸೌಹಾರ್ದ ಸಂದೇಶ ಜಾಥಾ ಆಗಮಿಸಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹಂಝತ್ ಹೆಜಮಾಡಿ ಹೇಳಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬುದ್ಧಿವಂತರ ಜಿಲ್ಲೆ ಎಂದು ಹೆಸರುವಾಸಿಯಾದ ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಶೀರಾ ಆತಂಕಕಾರಿಯಾಗಿದೆ.ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಮವು ತೀವ್ರಗೊಳ್ಳುತ್ತಿದ್ದು ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು ನಮ್ಮದು ಆದರೆ ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಜಾತಿ ಮತ ಪಥ ಪಂಥ ಪಕ್ಷ ಪಂಗಡಗಳ ಹೆಸರಿನಲ್ಲಿ ಪರಸ್ಪರ ಮಾಂಸ ಕೀಳುವ, ರಕ್ತ ಹರಿಸುವ, ಒಬ್ಬರನ್ನೊಬ್ಬರು ಕೊಲ್ಲುವ ತನಕ ಮೊರ, ವಿದ್ವೇಷಗಳು ಮಿತಿ ಮೀರಿವೆ. ಇದಕ್ಕೆಲ್ಲ ಇತಿಶ್ರೀ ಹಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಜಾತಿ ಮತ ಪಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ’ (ಎಸ್ ವೈ ಎಸ್)  ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವು ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ದಿನಾಂಕ: 14-07-2025 ಸೋಮವಾರ ಬೆಳಿಗೆ 8 ಗಂಟೆಗೆ ಕುಂದಾಪುರ ಅಸ್ವಯ್ಯದ್ ಯೂಸುಫ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರವು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ನಂತರ ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ

ಮಧ್ಯಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಕಾರ್ಕಳ ಗ್ಯಾಲಕ್ಸಿ ಹಾಲ್ ನಿಂದ ಬಸ್ಸು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಸಂಜೆ 5:30 ಗಂಟೆಗೆ ಕಾಪು ಪೊಲಿವು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ಸೌಹಾರ್ದ ನಡಿಗೆ ಹಾಗೂ ಸಂದೇಶ ಭಾಷಣ ನಡೆಯಲಿದೆ. ರಾತ್ರಿ 8 ಗಂಟೆಗೆ ಪಡುಬಿದ್ರಿ ಸೌಹಾರ್ದ ಭಾಷಣ ನಡೆಯಲಿದೆ ಎಂದರು.

ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಶೈಕ್ಷಣಿಕ ಹಾಗೂ ಇನ್ನಿತರ ಪ್ರಮುಖ ನಾಯಕರುಗಳು ಭಾಗವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಹಬೀಬ್ ಆಲಿ, ಪ್ರಧಾನ ಕಾರ್ಯದರ್ಶಿ ಎಮ್ ಸಲೀಂ ಪಕೀರ್ಣಕಟ್ಟೆ, ಎಸ್ ವೈ ಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಹುಸೈನ್ ಸಅದಿ ಹೊಸ್ಮಾರು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, ಸ್ವಾಗತ ಸಮಿತಿ ಸಂಚಾಲಕರಾದ ಇಂತಿಯಾಝ್ ಹೊನ್ನಾಳ, ಕಾರ್ಯದರ್ಶಿ ತೌಫೀಕ್ ಅಂಬಾಗಿಲು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *