ಕಾರವಾರ, ಜುಲೈ 14, 2025: ಹದಿನಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಂತರ ಜಿಲ್ಲಾ ರೌಡಿಶೀಟರ್ ಪ್ರವೀಣ ಮನೋಹರ ಸುಧೀರ್ (37) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಯಲ್ಲಾಪುರದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಮ್ಮ ರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


ರಾಮನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಸೇರಿದಂತೆ, ಕೊಲೆ ಯತ್ನ, ಸುಲಿಗೆ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿ ಒಟ್ಟು 16 ಪ್ರಕರಣಗಳು ಆರೋಪಿ ಮೇಲೆ ದಾಖಲಾಗಿದ್ದವು.

ದಾಂಡೇಲಿ ಉಪ ವಿಭಾಗದ ಡಿವೈಎಸ್‌ಪಿ ಶ್ರೀ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಸಿ.ಪಿ.ಐ-ಜೋಯಿಡಾ ಚಂದ್ರಶೇಖರ ಹರಿಹರ ನೇತೃತ್ವದಲ್ಲಿ ಪಿ.ಎಸ್.ಐ ಮಹಾಂತೇಶ ನಾಯಕ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಈತನನ್ನು ಬಂದಿಸಲಾಗಿದೆ.

ಯಲ್ಲಾಪುರ ಠಾಣಾ ವ್ಯಾಪ್ತಿಯ ಕಣ್ಣಿಗೇರಿ ಬಳಿ ಅರಣ್ಯದಲ್ಲಿ ಪ್ರವೀಣ ಅವಿತುಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಆರೋಪಿಯು ಚಾಕು ಮತ್ತು ಕಲ್ಲುಗಳಿಂದ ಪಿ.ಎಸ್.ಐ ಮಹಾಂತೇಶ ನಾಯಕ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವೇಳೆ ಪಿ.ಎಸ್.ಐ ಮಹಾಂತೇಶ ನಾಯಕ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ 2 ಬಾರಿ ಗಾಳಿಯಲ್ಲಿ ಫೈರ್ ಮಾಡಿ, ನಂತರ ಆರೋಪಿ ಪ್ರವೀಣ ನ ಬಲಗಾಲಿನ ಮಂಡಿಯ ಕೆಳಭಾಗಕ್ಕೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಪಿ.ಎಸ್.ಐ ಮಹಾಂತೇಶ ಮತ್ತು ಸಿಬ್ಬಂದಿಗಳು ಗಾಯಗೊಂಡಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತ ಆರೋಪಿ ಪ್ರವೀಣನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Leave a Reply