ಗಂಗೊಳ್ಳಿ: ಕೋಳಿ ಅಂಕ; ಪೊಲೀಸ್ ದಾಳಿ: ಮೂವರ ಬಂಧನ

ಗಂಗೊಳ್ಳಿ, ಜುಲೈ 14, 2025: ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪವನ್‌ ನಾಯಕ್‌ ಇವರ ನೇತೃತ್ವದಲ್ಲಿ ಗುಜ್ಜಾಡಿ ಗ್ರಾಮದ ಮಂಕಿ ಬಳಿಯ ದ್ಯಾಸನಮಕ್ಕಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಆರೋಪಿತರಾದ ರವೀಂದ್ರ ಮತ್ತು ವಿಕ್ರಮ್ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಘಟನೆಯಿಂದ ಓಡಿ ಹೋದ ಇತರ ಆರೋಪಿತರಾದ ಉಮೇಶ್ ಮತ್ತು ಸುಧಾಕರ್ ಎಂದು ಗುರುತಿಸಲಾಗಿದೆ.

ಪೊಲೀಸರು ಸ್ಥಳದಲ್ಲಿ ಕೋಳಿ ಜುಗಾರಿ ಆಟಕ್ಕೆ ಬಳಸಿದ 5 ಕೋಳಿ ಹುಂಜಗಳು, 5 ಕತ್ತಿಗಳು, ಕೋಳಿಗಳ ಕಾಲಿಗೆ ಬಾಳನ್ನು ಕಟ್ಟಲು ಉಪಯೋಗಿಸಿದ 5 ಹಗ್ಗಗಳು ಹಾಗೂ ಪಣಕ್ಕಾಗಿ ಕಟ್ಟಲಾಗಿದ್ದ 2,200 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಆರೋಪಿತರು ಬಳಸಿದ ಮೂರು ಮೋಟಾರು ಸೈಕಲ್‌ಗಳಾದ ಟಿವಿಎಸ್‌ ಕಂಪನಿಯ (KA-20-EW-6343), ಬಜಾಜ್‌ ಡಿಸ್ಕವರ್‌ ಕಂಪನಿಯ (KA-20-EC-3736), ಮತ್ತು ಹೊಂಡಾ ಮ್ಯಾಟ್ರಿಕ್ಸ್‌ ಕಂಪನಿಯ (KA-20-EM-7544) ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿತರು ಕೋಳಿಗಳಿಗೆ ಆಹಾರ ಮತ್ತು ನೀರು ನೀಡದೆ, ಕಾಲಿಗೆ ಕತ್ತಿಗಳನ್ನು ಕಟ್ಟಿ ಹಿಂಸೆ ನೀಡಿ, ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟವನ್ನು ನಡೆಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2025ರ ಅಡಿಯಲ್ಲಿ ಕಲಂ 11 (1) (A) The Prevention of Cruelty to Animals Act 1960 ಮತ್ತು ಕೆ.ಪಿ ಆಕ್ಟ್‌ನ ಕಲಂ 87, 93 ರಂತೆ ಪ್ರಕರಣ ದಾಖಲಾಗಿದೆ.

ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಓಡಿ ಹೋದ ಆರೋಪಿತರನ್ನು ಶೀಘ್ರದಲ್ಲಿ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *