ಧರ್ಮಗಳ ಅಂತರ ತೊರೆದು ಸೌಹಾರ್ದತೆ ಸ್ಥಾಪಿಸುವುದು ಅಗತ್ಯ: ಶ್ರೀ ವಸಂತನಾಥ ಗುರೂಜಿ

ಕುಂದಾಪುರ: ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಾನು ಭಾರತೀಯ ಎನ್ನುವ ಧ್ಯೇಯವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಧರ್ಮಗಳೂ ಒಂದೇ ಎಂಬ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಬೇಕಾಗಿದೆ. ಜಾತಿ, ಮತ, ಪಂಥಗಳ ಅಂತರಗಳನ್ನು ತೊರೆದು ಸೌಹಾರ್ದತೆಯೊಂದಿಗೆ ಸಾಗಬೇಕು ಎಂದು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧೈಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ’ಸೌಹಾರ್ದ ಸಂಚಾರ’ವನ್ನು ಸೋಮವಾರ ಕುಂದಾಪುರದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸೌಹಾರ್ದ ಸಂಚಾರಕ್ಕೆ ಚಾಲನೆ ನೀಡಿದ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ, ಪವಿತ್ರ ಕುರಾನ್ ಹಿಂಸೆಯನ್ನು ಆರಾಧಿಸುವುದಿಲ್ಲ. ಪೈಗಂಬರ್ ಜೀವನ ಚರಿತ್ರೆ ಯನ್ನು ಸರಿಯಾಗಿ ಅಧ್ಯಯನ ಮಾಡಿದ ಯಾವ ವ್ಯಕ್ತಿಯೂ ಧರ್ಮದ್ವೇಷ ಮಾಡಲು ಸಾಧ್ಯವಿಲ್ಲ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಪ್ರೀತಿಸು ಎನ್ನುತ್ತದೆಯೇ ಹೊರತು ದ್ವೇಷಿಸಲು ಉಪದೇಶಿ ಸುವುದಿಲ್ಲ. ಎಲ್ಲಾ ಧರ್ಮದ ಸಾರ ಶಾಂತಿ ಸಾರುವುದೇ ಆಗಿದೆ ಎಂದು ಹೇಳಿದರು.

“ಪ್ರಸ್ತುತ ಕಾಲಘಟ್ಟದಲ್ಲಿ ಸೌಹಾರ್ದ ಸಂಚಾರ ಆರಂಭಿಸುವ ಸ್ಥಿತಿಗೆ ತಲುಪಿದ್ದು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯಬೇಕು. ಕುಂದಾಪುರ ತಾಲೂಕಿನ ಮಂದಿ ನೂರಾರು ವರ್ಷಗಳಿಂದ ಸೌಹಾದರ್ಯುತ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಧರ್ಮದ ಹಬ್ಬ, ಹರಿದಿನಗಳಲ್ಲಿ, ಆಚರಣೆಗಳಲ್ಲಿ ಜನರು ಪರಸ್ಪರ ಬೆರೆ ಯುತ್ತಿದ್ದಾರೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬಂದು ನೆಮ್ಮದಿ ಹಾಳಾಗಿದ್ದರೂ ಕೂಡ ನೈಜ್ಯ ಪರಂಪರೆಗೆ ಯಾವುದೇ ಸಮಸ್ಯೆಯಾಗಿಲ್ಲ” – ಶಶಿಧರ್ ಹೆಮ್ಮಾಡಿ, ಪ್ರಗತಿಪರ ಚಿಂತಕ

ಧರ್ಮಗುರು ರೆ.ಫಾ.ನೋವೆಲ್ ಬ್ರಹ್ಮಾವರ ಮಾತನಾಡಿ, ಕ್ರೈಸ್ತ ಮೆಷಿನರಿಗಳು ಕರಾವಳಿಯಲ್ಲಿ ಇಂದಿಗೂ ಯಾವುದೇ ಧರ್ಮ ಬೇದ ಮಾಡದೇ ಸಾಮಾಜಿಕ ಸೇವೆ ನೀಡುತ್ತಿದೆ. ಫಾದರ್ ಮುಲ್ಲರ್ ಆಸ್ಪತ್ರೆ, ಬಾಸೆಲ್ ಮಿಷನ್ ಹೆಂಚಿನ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಇಂದಿಗೂ ಕೊಡುಗೆಯಾಗಿ ಉಳಿದಿಲ್ಲ, ಅವು ಸಹೋದರತೆ, ನಂಬಿಕೆ, ವಿಶ್ವಾಸಗಳನ್ನು ಗಟ್ಟಿಗೊಳಿಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಯಾವ ರಾಜಕೀಯ ಪಕ್ಷಗಳು, ನಾಯಕರು ನಮ್ಮನ್ನು ಒಂದುಗೂಡಿಸಬೇಕಿತ್ತೋ ಅವೇ ನಮ್ಮನ್ನು ವಿಭಜಿಸಲು ಹುನ್ನಾರ ನಡೆಸುತ್ತಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಕುಂದಾಪುರದ ಮುಖ್ಯ ಪೇಟೆಯಲ್ಲಿ ಶಾಂತಿ ಮೆರವಣಿಗೆ ನಡೆಯಿತು. ಮುಖ್ಯ ಅತಿಥಿಯಾಗಿ ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತನಾಡಿದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಅಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.

ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಸಹಬಾಳ್ವೆ ಕುಂದಾಪುರದ ರಾಮಕೃಷ್ಣ ಹೇರ್ಳೆ, ಸಿಪಿಐಎಂ ಪಕ್ಷದ ಮುಖಂಡರಾದ ಚಂದ್ರಶೇಖರ ದೇವಾಡಿಗ, ಮಹಾಬಲ, ಕುಂದಾಪುರ ಕ್ಯಾಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿ ಅಲ್ಮೇಡಾ, ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಎಸ್ವೈಎಸ್ ಸಂಘಟನೆಯ ಕುಂದಾಪುರ ತಾಲೂಕು ಉಪಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ವಕ್ಫ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮುತಾಲಿ ವಂಡ್ಸೆ, ನಾವುಂದ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಫಾಲೆಲಿ, ಕುಂದಾಪುರ ಜುಮ್ಮಾ ಮಸೀದಿ ಅಧ್ಯಕ್ಷ ವಸೀಂ ಬಾಷಾ, ಸಾಮಾಜಿಕ ಕಾರ್ಯಕರ್ತ ಮನ್ಸೂರ್ ಮರವಂತೆ ಉಪಸ್ಥಿತರಿದ್ದರು.

ಎಸ್‌ವೈಎಸ್ ರಾಜ್ಯ ಸಮಿತಿಯ ಸದಸ್ಯ ಕೆ.ಎಂ.ಇಲಿಯಾಸ್ ಸ್ವಾಗತಿಸಿದರು. ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ ಬೆಂಗಳೂರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬು ಅಹಮ್ಮದ್ ವಂದಿಸಿದರು.

Comments

Leave a Reply

Your email address will not be published. Required fields are marked *