ಉಡುಪಿ, ಜುಲೈ 14, 2025: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ‘ಸೌಹಾರ್ದ ಸಂಚಾರ’ ಕಾರ್ಯಕ್ರಮವನ್ನು ಸೋಮವಾರ ಉಡುಪಿ ನಗರದಲ್ಲಿ ಆಯೋಜಿಸಿತು. ಈ ಕಾರ್ಯಕ್ರಮ ಉಡುಪಿ ಜಾಮೀಯ ಮಸೀದಿಯಿಂದ ಆರಂಭಗೊಂಡು, ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಉಡುಪಿ ಶೋಕಾ ಮಾತಾ ಇಗರ್ಜಿಯಲ್ಲಿ ಸಮಾಪ್ತಿಗೊಂಡಿತು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, “ನಮ್ಮ ಧರ್ಮ, ನಂಬಿಕೆಗಳು ಖಾಸಗಿಯೇ ಹೊರತು ಸಾರ್ವಜನಿಕ ಅಲ್ಲ. ಆದರೆ ಇತ್ತೀಚಿಗೆ ಕೆಲವರು ಧರ್ಮವನ್ನು ಆಧಾರವಾಗಿ ಇರಿಸಿ ಅಮಾಯಕರ ಮೇಲೆ ದಾಳಿ ಮಾಡಿ ಕೊಲೆ ಮಾಡುವ ಘಟನೆಗಳು ಈ ಜಿಲ್ಲೆಯಲ್ಲಿ ನಡೆಯುತ್ತಿವೆ. ಈ ನಾಡಿನ ಸಾವಿರಾರು ವರ್ಷಗಳಿಂದ ಎಲ್ಲ ಜಾತಿ ಧರ್ಮದವರು ಸೌಹಾದರ್ತೆಯಿಂದ ಬಾಳಿ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರ ಪ್ರಚೋದನೆಗೆ ಜನ ಬಲಿಯಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

“ಇಂದು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಜಾತಿಯ ಯುವಕರು ಇದ್ದಾರೆ. ದುಡಿದು ತಿನ್ನಬೇಕಾದ ಮಕ್ಕಳು ತಂದೆತಾಯಿಗೆ ಆಸರೆಯಾಗಬೇಕಾದವರು ಜೈಲಿನಲ್ಲಿ ಕೊಳೆಯುತ್ತಿರುವುದು ದುರಂತ. ಈ ದುಷ್ಟ ಶಕ್ತಿಗಳನ್ನು ನಾವೆಲ್ಲ ಸೇರಿ ಸೋಲಿಸಬೇಕು. ಸಮಾನತೆ, ಸಂವಿಧಾನ ಮತ್ತು ಜಾತ್ಯತೀತತೆಯ ವಿರುದ್ಧ ಇರುವ ಸಂಘಟನೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು” ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ, ಸೌಹಾರ್ದ ಸಂಚಾರ ಸಮಿತಿಯ ಅಧ್ಯಕ್ಷ ಹಂಝತ್ ಹೆಜಮಾಡಿ, ಬೈಂದೂರು ಜೋಗಿಮನೆಯ ಶ್ರೀವಸಂತನಾಥ ಗುರುಜೀ, ಮತ್ತು ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ. ಲಿಯೋ ಪ್ರವೀಣ್ ಡಿಸೋಜಾ ಸಹ ಐಕ್ಯತೆಯ ಸಂದೇಶ ನೀಡಿದರು.


ಈ ಕಾರ್ಯಕ್ರಮದಲ್ಲಿ ಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ (ಬೆಂಗಳೂರು), ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂಬಕರ್ ಸಿದ್ದೀಕ್ (ಮೊಂಟಗೊಳಿ), ನ್ಯಾಯವಾದಿ ಹಬೀಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ, ಮತ್ತು ಪ್ರಮುಖರಾದ ಎಂ.ಎ.ಗಫೂರ್, ಡಾ.ಗಣನಾಥ ಎಕ್ಕಾರು, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ನಾಗೇಶ್ ಉದ್ಯಾವರ, ಪ್ರಭಾಕರ ಪೂಜಾರಿ, ವಹೀದ್ ಶೇಖ್ (ಉದ್ಯಾವರ), ಸುಭಾನ್ ಹೊನ್ನಾಳ, ಇಸ್ಮಾಯಿಲ್ ಹುಸೇನ್ (ಕಟಪಾಡಿ), ಹನೀಫ್ ಹಾಜಿ (ಅಂಬಾಗಿಲು), ತೌಫಿಕ್ ಹಾಜಿ ಸೇರಿದಂತೆ ಇತರರು ಭಾಗವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸಂಯೋಜಕ ಅಬ್ದುರ್ರಹ್ಮಾನ್ ರಝ್ವಿ (ಕಲ್ಕಟ್ಟ) ಕಾರ್ಯಕ್ರಮವನ್ನು ನಿರೂಪಿಸಿದರು.
Leave a Reply