ಉಡುಪಿ, ಜುಲೈ 14, 2025: ಜೂನ್ 20, 2025ರಂದು ನಡೆದ ಮಾನ್ಯ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ, ಬೀಜೋತ್ಪಾದನೆಯಲ್ಲಿ ತೊಡಗಿದ 31 ರೈತರಿಗೆ ಹಣ ಸಂದಾಯವಾಗದೆ ಇರುವ ಬಗ್ಗೆ ಚರ್ಚೆ ನಡೆಯಿತು. ಉಸ್ತುವಾರಿ ಸಚಿವರು ತಕ್ಷಣ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದು, ಇದರ ಪ್ರಕಾರ 23 ರೈತರಿಗೆ ಹಣ ಸಂದಾಯವಾಗಿದೆ. ಉಳಿದ 8 ರೈತರಿಗೆ ಭಾಗಶಃ ಹಣ ಬಿಡುಗಡೆಯಾಗಿರುವಾಗ, ಕೆಲವು ರೈತರು ದೂರವಾಣಿ ಮೂಲಕ ಉಳಿದ ಹಣ ಸಂದಾಯವಾಗದೆ ಇರುವ ಬಗ್ಗೆ ದೂರಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಇಂದು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳಿದ 8 ರೈತರಿಗೆ ಭಾಗಶಃ ಹಣ ಬಿಡುಗಡೆಯಾಗುವಂತೆ ಸೂಚಿಸಿದ ಬಳಿಕ, ತಕ್ಷಣವೇ ರೈತರಿಗೆ ಉಳಿದ ಹಣ ಸಂದಾಯವಾಗಿದೆ. ಇದೇ ಸಂದರ್ಭದಲ್ಲಿ, ಭತ್ತದ ಸಸಿಮಡಿಗಳ ತಾಕನ್ನು ಪರೀಕ್ಷಿಸಿ, ಸಂಶೋಧನಾ ಕೇಂದ್ರದಿಂದ ರೈತರಿಗೆ ಒದಗಿಸಲಾಗುವ ತರಬೇತಿ, ಬಿತ್ತನೆ ಬೀಜ, ಯಾಂತ್ರೀಕೃತ ಸೇವೆಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಯಿತು.

ಅಲ್ಲದೆ, ಬ್ರಹ್ಮಾವರದ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ತರಬೇತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಕಛೇರಿ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಲಾಯಿತು. 2025-26ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೃಷಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂವಾದ ನಡೆಸಿ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಯಿತು.
Leave a Reply